ಬೆಂಗಳೂರು: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿದ್ದ ನಕಲಿ ವಿಡಿಯೋ ಬಳಸಿಕೊಂಡು ಸೈಬರ್ ಕಳ್ಳರು ವೃದ್ಧರೊಬ್ಬರಿಗೆ 1 ಲಕ್ಷ ರೂ. ವಂಚನೆ ಮಾಡಿದ್ದಾರೆ.

ಈ ಸಂಬಂಧ ದೊಡ್ಡಬೊಮ್ಮಸಂದ್ರ ನಿವಾಸಿ ವೇಣುಗೋಪಾಲ್ (6 4) ನೀಡಿದ ದೂರಿನ ಮೇರೆಗೆ ವಿದ್ಯಾರಣ್ಯಪುರ ಠಾಣೆ ಪೊಲೀಸರು ವಂಚಕರ ವಿರುದ್ಧ ಪ್ರಕರಣ ದಾಖಲಾಗಿದೆ. ಆ.27ರಂದು ವೇಣುಗೋಪಾಲ್ ಜಾಲತಾಣ ಯುಟ್ಯೂಬ್ನಲ್ಲಿ ಕಡಿಮೆ ಹಣ ಹೂಡಿದರೆ ಹೆಚ್ಚು ಲಾಭ ಗಳಿಸಬಹುದು ಎಂಬ ಜಾಹೀರಾತು ನೋಡಿದ್ದರು. ಅದರಲ್ಲಿ ನಿರ್ಮಲಾ ಸೀತಾರಾಮನ್ ಇರುವಂತೆ ಎ ಐ ಮೂಲಕ ವಿಡಿಯೋ ತುಣುಕನ್ನು ಸೃಷ್ಟಿಸಿದ್ದರು. ಹೀಗಾಗಿ ಹಣ ಹೂಡಿಕೆ ಮಾಡಲು ನಿರ್ಧರಿಸಿದ ವೇಣುಗೋಪಾಲ್, ಸಂಬಂಧಿಸಿದ ಆ್ಯಪ್ ಡೌನ್ ಲೋಡ್ ಮಾಡಿ ನೋಂದಣಿ ಮಾಡಿಕೊಂಡಿದ್ದರು.
ನೋಂದಣಿಯಾದ ತಕ್ಷಣ ಕರೆ ಮಾಡಿದ ಅಪರಿಚಿತ ವ್ಯಕ್ತಿ ತಾನು ಟ್ರೇಡಿಂಗ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡು, 22 ಸಾವಿರ ರೂ. ಹೂಡಿಕೆ ಮಾಡುವಂತೆ ತಿಳಿಸಿದ್ದ. ಆತನ ಸೂಚನೆಯಂತೆ ಹಂತ-ಹಂತವಾಗಿ 1.04 ಲಕ್ಷ ರೂ. ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖೀಸಿದ್ದಾರೆ.




