ಮಂಗಳೂರು: ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಸ್ಕ್ಯಾನಿಂಗ್ ನಡೆಸಲು ರೋಗಿಯ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ತಪ್ಪಿದ್ದಲ್ಲಿ ಅಂತಹ ಸೆಂಟರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್.ಆರ್. ತಿಮ್ಮಯ್ಯ ತಿಳಿಸಿದ್ದಾರೆ.

ಮಂಗಳವಾರ ನಡೆದ ಜನನ ಪೂರ್ವ ಲಿಂಗ ನಿರ್ಣಯ ತಡೆ ಕಾಯಿದೆ 1994ಕ್ಕೆ ಸಂಬಂಧಿಸಿದ ಜಿಲ್ಲಾಮಟ್ಟದ ಸಲಹಾ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.
ಗುರುತಿನ ಚೀಟಿಯನ್ನು ನಿಖರವಾಗಿ ಪರಿಶೀಲಿಸಬೇಕು. ಈ ಬಗ್ಗೆ ಸ್ಕ್ಯಾನಿಂಗ್ ಸೆಂಟರ್‌ಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ವರದಿಗಳಿಗೆ ಆಯಾ ತಜ್ಞ ವೈದ್ಯರುಗಳೇ ಸಹಿ ಹಾಕಬೇಕು. ಸಿಬಂದಿ ಸಹಿ ಹಾಕುವಂತಿಲ್ಲ ಎಂದರು.
ಜಿಲ್ಲೆಯಲ್ಲಿ ಒಟ್ಟು 189 ಸ್ಕ್ಯಾನಿಂಗ್ ಸೆಂಟರ್‌ಗಳು ಕಾರ್ಯನಿರ್ವಹಿಸುತ್ತಿದೆ. ಈ ಪೈಕಿ 12 ಸರಕಾರಿ ಹಾಗೂ 177 ಖಾಸಗಿ ಕೇಂದ್ರಗಳಿವೆ. ಸ್ಕ್ಯಾನಿಂಗ್ ಸೆಂಟರ್‌ಗಳ ತಪಾಸಣೆ ಮಾಡಲು ತಂಡ ರಚಿಸಲಾಗಿದ್ದು, 2025ರ ಎಪ್ರಿಲ್‌ನಿಂದ ಆಗಸ್ಟ್‌ವರೆಗೆ ಜಿಲ್ಲೆಯಲ್ಲಿ 274 ಖಾಸಗಿ ಹಾಗೂ 15 ಸ್ಕ್ಯಾನಿಂಗ್ ಸೆಂಟರ್‌ಗಳ ತಪಾಸಣೆ ನಡೆಸಲಾಗಿದೆ ಎಂದವರು ತಿಳಿಸಿದರು.
2024-25ರಲ್ಲಿ ಜಿಲ್ಲೆಯಲ್ಲಿ 12,540 ಗಂಡು ಮಕ್ಕಳು ಹಾಗೂ 11,758 ಹೆಣ್ಣು ಮಕ್ಕಳು ಜನನವಾಗಿದ್ದು ಗಂಡು ಹೆಣ್ಣು ಅನುಪಾತ 938 ಆಗಿರುತ್ತದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಿಸಿ/ಪಿಎನ್‌ಡಿಟಿ ಕಾಯ್ದೆ ಹಾಗೂ ಕಾನೂನಿನ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಕಾಲೇಜು ಮಕ್ಕಳಿಗೆ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.
ಜಿಲ್ಲಾ ಮಟ್ಟದ ಸಲಹಾ ಸಮಿತಿ ಅಧ್ಯಕ್ಷೆ ಡಾ| ಅಮೃತಾ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಸದಸ್ಯರಾದ ಡಾ| ಸುಂದರಿ, ರಾಣಿ ಮಂಗಳ, ಅನಿತ್‌ರಾಜ್ ಭಟ್, ಡಾ| ದೀಪಾ ಪ್ರಭು, ಚಂದ್ರಹಾಸ, ವಸಂತ ಪೆರಾಜೆ, ಡಾ| ನಂಜೇಶ್ ಕುಮಾರ್, ಬಿ.ಎ. ಖಾದರ್ ಶಾ ಉಪಸ್ಥಿತರಿದ್ದರು.




