ನವದೆಹಲಿ: ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಸದ್ಯಕ್ಕೆ ಕಡ್ಡಾಯವಾಗಿರುವ ಒಟಿಪಿ ಆಧಾರಿತ ಎರಡನೇ ಹಂತದ ದೃಢೀಕರಣದ ಜತೆಗೆ ಬಳಕೆದಾರರಿಗೆ ಹೆಚ್ಚು ಅರಿವಿರುವ ಇನ್ನಷ್ಟು ವಿನೂತನ ದೃಢೀಕರಣ ವಿಧಾನಗಳನ್ನು ಪರಿಚಯಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮುಂದಾಗಿದೆ.

2026ರ ಏಪ್ರಿಲ್ನಿಂದ ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಒಟಿಪಿ ಆಧಾರಿತ ಎರಡನೇ ಹಂತದ ದೃಢೀಕರಣ ವ್ಯವಸ್ಥೆಯನ್ನೂ ಉಳಿಸಿಕೊಂಡು, ಹೆಚ್ಚುವರಿಯಾಗಿ ಪಾಸ್ವರ್ಡ್ (ಗುಪ್ತಾಂಕ), ಪಿನ್, ಸಾರ್ ಟೋಕನ್, ಬೆರಳಚ್ಚು, ಫೇಸ್ಐಡಿ ಹಾಗೂ ಆಧಾರ್ ದೃಢೀಕರಣ ಮುಂತಾದ ಬಯೋಮೆಟ್ರಿಕ್ ವಿಧಾನಗಳನ್ನು ಪರಿಚಯಿಸಲು ಮುಂದಾಗಿರುವುದಾಗಿ ಆರ್ಬಿಐ ತಿಳಿಸಿದೆ.
ದೇಶದೊಳಗಿನ ಡಿಜಿಟಲ್ ಪಾವತಿ ವ್ಯವಸ್ಥೆಗಳಿಗೆ 2026ರ ಏ.1ರಿಂದ ಹಾಗೂ ಗಡಿಯಾಚೆಗಿನ ಕಾರ್ಡ್ ರಹಿತ ಡಿಜಿಟಲ್ ಪಾವತಿ ವ್ಯವಹಾರಗಳು 2026ರ ಅ.1ರಿಂದ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಂತೆ ಆರ್ಬಿಐ ಸೂಚಿಸಿದೆ. ಹೊಸ ವಿಧಾನದಿಂದಾಗಿ ಗ್ರಾಹಕರು ಪದೇ ಪದೇ ಒಟಿಪಿಗಳನ್ನು ನಮೂದಿಸುವ ಕಿರಿಕಿರಿಯಿಲ್ಲದೇ ಸುರಕ್ಷಿತ ಡಿಜಿಟಲ್ ಪಾವತಿ ವಿಧಾನಗಳನ್ನು ಇನ್ನಷ್ಟು ಸರಾಗವಾಗಿ ನಡೆಸಲು ನೆರವಾಗುವ ನಿರೀಕ್ಷೆಯಿದೆ.




