ಹೆಣ್ಮಕ್ಳೆ ಸ್ಟ್ರಾಂಗು ಗುರು: ಸತತ 2ನೇ ಬಾರಿ ಕಬಡ್ಡಿಯಲ್ಲಿ ವಿಶ್ವಕಪ್ ಗೆದ್ದ ಭಾರತೀಯ ನಾರಿಯರು

Share with

ಸೋಮವಾರ ಬಾಂಗ್ಲಾದೇಶದ ಢಾಕಾದಲ್ಲಿ ನಡೆದ 2025ರ ಮಹಿಳಾ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ (Women’s Kabaddi World Cup) ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆ ಮೂಲಕ ಭಾರತೀಯ ನಾರಿಯರು ಸತತ ಎರಡನೇ ಬಾರಿಗೆ ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿದ್ದಾರೆ. ರೋಚಕ ಫೈನಲ್ ಪಂದ್ಯದಲ್ಲಿ ಚೈನೀಸ್ ತೈಪೆ ತಂಡವನ್ನು 35-28 ಅಂಕಗಳ ಅಂತರದಲ್ಲಿ ಸೋಲಿಸುವ ಮೂಲಕ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ.

2012ರಲ್ಲಿ ಬಿಹಾರದಲ್ಲಿ ಕೊನೆಯ ಬಾರಿ ವಿಶ್ವಕಪ್ ಪಂದ್ಯ ನಡೆದಿತ್ತು. ಆ ಬಳಿಕ 13 ವರ್ಷಗಳ ನಂತರ ಎರಡನೇ ಆವೃತ್ತಿಯ ಮಹಿಳೆಯರ ವಿಶ್ವಕಪ್ ಟೂರ್ನಿ ಆಯೋಜಿಸಲಾಗಿತ್ತು. ಮೊದಲ ಆವೃತ್ತಿಯಲ್ಲಿ ಕೂಡ ಭಾರತ ತಂಡ ಚಾಂಪಿಯನ್ ಆಗಿತ್ತು.

ಪ್ರಧಾನಿ ಮೋದಿ ಟ್ವೀಟ್

ಸೆಮಿಫೈನಲ್‌ನಲ್ಲಿ ಇರಾನ್ ತಂಡವನ್ನು 33–21 ಅಂತರದಿಂದ ಸೋಲಿಸುವ ಮೂಲಕ ಭಾರತ ತಂಡ ಫೈನಲ್ ಪ್ರವೇಶಿಸಿತ್ತು. ಇತ್ತ ಚೈನೀಸ್ ತೈಪೆ ತಂಡ ಕೂಡ ತನ್ನದೇ ಆದ ಅಜೇಯ ದಾಖಲೆಯೊಂದಿಗೆ ಫೈನಲ್‌ಗೆ ತಲುಪಿತ್ತು. ಇಂದು ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಚೈನೀಸ್ ತೈಪೆ ತಂಡವನ್ನು ಮಣಿಸುವ ಮೂಲಕ ವಿಶ್ವಕಪ್ ಟ್ರೋಫಿಯನ್ನು ಭಾರತ ತಂಡ ಎತ್ತಿಹಿಡಿದಿದೆ.

ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ
ಮಹಿಳಾ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಗೆದ್ದ ಖುಷಿಯಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ‘2025ರ ಕಬಡ್ಡಿ ವಿಶ್ವಕಪ್ ಗೆಲ್ಲುವ ಮೂಲಕ ದೇಶ ಹೆಮ್ಮೆಪಡುವಂತೆ ಮಾಡಿದ ನಮ್ಮ ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ ಅಭಿನಂದನೆಗಳು.  ಅವರು ಅತ್ಯುತ್ತಮ ಕ್ರೀಡಾ ಸಮರ್ಪಣಾ ಭಾವವನ್ನು ಪ್ರದರ್ಶಿಸಿದ್ದಾರೆ. ಅವರ ಈ ಗೆಲುವು ಅಸಂಖ್ಯಾತ ಯುವಕರಿಗೆ ಸ್ಫೂರ್ತಿ’ ಎಂದಿದ್ದಾರೆ.


Share with

Leave a Reply

Your email address will not be published. Required fields are marked *