ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಮಾಹಿತಿ ನೀಡಿದ್ದಾರೆ.

ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಬಿಡುಗಡೆ ಕುರಿತು ಮಾಹಿತಿ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಬಿಪಿಎಲ್ ಕಾರ್ಡ್ ರದ್ದಾಗಿರುವವರಿಗೆ ಹಣ ವರ್ಗಾವಣೆಯಾಗುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ‘ಹಣಕಾಸು ಇಲಾಖೆಯವರು ಅನುಮತಿ ನೀಡಿದ ತಕ್ಷಣವೇ 2025ರ ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆಯ (Gruha Lakshmi) ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುವುದು.
ಈ ಎರಡು ತಿಂಗಳ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆ ಕುರಿತಂತೆ ಈಗಾಗಲೇ ಮುಖ್ಯಮಂತ್ರಿಗಳ ಬಳಿ ಮಾತನಾಡಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳು ಕೂಡ ಸದನದಲ್ಲಿ ಉತ್ತರ ಕೊಟ್ಟಿದ್ದಾರೆ ಎಂದರು.
BPL ಕಾರ್ಡ್ ರದ್ದಾಗಿದ್ದರೆ ಹಣ ಕೂಡ ರದ್ದು
ಇದೇ ವೇಳೆ ರಾಜ್ಯದಲ್ಲಿ ಬಿಪಿಎಲ್ ಕಾರ್ಡುಗಳನ್ನು ಪರಿಶೀಲನೆಗೆ ಒಳಪಡಿಸಿ ಅಕ್ರಮ ಪಡಿತರ ಕಾರ್ಡುಗಳನ್ನು ರದ್ದುಗೊಳಿಸಲಾಗುತ್ತಿದೆ. ಇದರಿಂದ ಅಕ್ರಮ ಪಡಿತರ ಕಾರ್ಡುಗಳನ್ನು ಕೊಟ್ಟು ಗೃಹಲಕ್ಷ್ಮೀ (Gruhalakshami) ಹಣ ಪಡೆಯುತ್ತಿದ್ದವರಿಗೆ ಹಣವನ್ನು ಕೂಡ ಸ್ಥಗಿತಗೊಳಿಸಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.
ಬಿಪಿಎಲ್, ಎಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ಈ ಹಿಂದೆ ಗೃಹಲಕ್ಷ್ಮೀ ಹಣ ನೀಡಲಾಗುತ್ತಿತ್ತು. ಆದ್ರೆ, ಇದೀಗ ತೆರಿಗೆ ಕಟ್ಟುವವರ ಬಿಪಿಎಲ್ ಕಾರ್ಡ್ ರದ್ದುಗೊಳಿಸಲಾಗಿದ್ದು, ಇದೀಗ ಅಂತವರ ಗೃಹಲಕ್ಷ್ಮೀ ಹಣ ಸಹ ಸ್ಥಗಿತಗೊಳಿಸಲಾಗುತ್ತಿದೆ.
ಅನರ್ಹ ರೇಷನ್ ಕಾರ್ಡ್ ರದ್ದಾಗಿರುವ ಕಾರಣ ಕೆಲವರಿಗೆ ಹಣ ಸಂದಾಯವಾಗಿಲ್ಲ. ಆಹಾರ ಇಲಾಖೆಯಿಂದ ಹೊಸ ಡೇಟಾ ಬಂದ ತಕ್ಷಣ ಅವರಿಗೂ ದುಡ್ಡು ರಿಲೀಸ್ ಆಗಲಿದೆ. ರೇಷನ್ ಕಾರ್ಡ್ ಆಧರಿಸಿ ನಾವು ಗೃಹಲಕ್ಷ್ಮಿ ಫಲಾನುಭವಿಗಳಿಗೆ ದುಡ್ಡು ಹಾಕುತ್ತಿದ್ದೇವೆ. ಕೆಲ ರೇಷನ್ ಕಾರ್ಡ್ ರದ್ದಾದಾಗ ದುಡ್ಡು ಹೋಲ್ಡ್ ಆಗಿರಬಹುದು. ಆದರೆ, ಅವರು ತೆರಿಗೆ ಪಾವತಿದಾರರಲ್ಲದಿದ್ದಲ್ಲಿ ಹಣ ಸಿಗಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಗೃಹಲಕ್ಷ್ಮಿ ಸಹಕಾರ ಸಂಘ
ಗೃಹಲಕ್ಷ್ಮಿ ಸಹಕಾರ ಸಂಘಕ್ಕೆ ಸದಸ್ಯರಾದವರು ಪ್ರತಿ ತಿಂಗಳು 200 ರೂಪಾಯಿ ಹಣ ಕಟ್ಟಿಕೊಂಡು ಹೋಗಬೇಕು. 6 ತಿಂಗಳು ಆದ ಬಳಿಕ ಸಾಲ ಸೌಲಭ್ಯ ಪಡೆಯಲು ಅರ್ಹರಾಗುತ್ತಾರೆ. ನನ್ನ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ಇದ್ದು, ಹೆಚ್ಚು ಕಂಡೀಷನ್‌ಗಳನ್ನು ಹಾಕದೇ ಅರ್ಹರನ್ನು ಗುರುತಿಸಿ ಸಾಲ ನೀಡಲಾಗುವುದು. ಜೊತೆಗೆ ಆರೋಗ್ಯ ವಿಮೆಯನ್ನು ನೀಡುವ ಯೋಚನೆ ಇದೆ ಎಂದು ಹೇಳಿದರು




