ಮದುವೆಯಾದ ಕೆಲವೇ ದಿನಕ್ಕೆ ಹಣ, ಚಿನ್ನಾಭರಣಗಳೊಂದಿಗೆ ವಧು ಪರಾರಿ..! ಐದಾರು ಮಂದಿಗೆ ವಂಚನೆ

Share with

ಸತಾರಾ: ಮದುವೆಯಾಗಲು ಹಂಬಲಿಸುತ್ತಿದ್ದ ಯುವಕರನ್ನೇ ಗುರಿಯಾಗಿಸಿಕೊಂಡು, ವಿವಾಹವಾದ ಕೆಲವೇ ದಿನಗಳಲ್ಲಿ ಹಣ ಹಾಗೂ ಚಿನ್ನಾಭರಣದೊಂದಿಗೆ ಪರಾರಿಯಾಗುತ್ತಿದ್ದ ಅಂತರ್ಜಿಲ್ಲಾ ವಂಚಕಿಯೊಬ್ಬಳು ಇದೀಗ ಪೊಲೀಸ್‌ ಬಲೆಯಲ್ಲಿ ಸಿಕ್ಕಿಬಿದ್ದಿದ್ದಾಳೆ. ಮಹಾರಾಷ್ಟ್ರದಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿರುವ ಈ ಘಟನೆಯಲ್ಲಿ ಯವತ್ಕಾಲ್ ಜಿಲ್ಲೆಯ ಭಾನುಪ್ರಿಯ ಭೌರಾವ್ ಬನ್ನೋಡ್ ಎಂಬಾಕೆ ಹಲವು ಕುಟುಂಬಗಳಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ.

ನಂಬಲಸಾಧ್ಯವಾದ ಈ ವಂಚನೆಯ ಜಾಲವು ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿತ್ತು. ಆರೋಪಿ ಭಾನುಪ್ರಿಯ ಇದುವರೆಗೆ ಕನಿಷ್ಠ ಐದರಿಂದ ಆರು ಮಂದಿಯನ್ನು ಮದುವೆಯಾಗಿದ್ದು, ಪ್ರತಿ ಬಾರಿಯೂ ಒಂದೇ ರೀತಿಯ ತಂತ್ರ ಅನುಸರಿಸುತ್ತಿದ್ದಳು. ಮದುವೆಯಾದ ನಂತರ ಪತಿಯ ಮನೆಯಲ್ಲಿ ಎಂಟು ಹತ್ತು ದಿನಗಳ ಕಾಲ ಅಚ್ಚುಕಟ್ಟಾಗಿ ಸಂಸಾರ ಮಾಡುತ್ತಾ ಎಲ್ಲರ ವಿಶ್ವಾಸಗಳಿಸುತ್ತಿದ್ದಳು. ಯಾವಾಗ ಮನೆಯವರು ಆಕೆಯನ್ನು ಪೂರ್ತಿಯಾಗಿ ನಂಬುತ್ತಾರೋ, ಅಂತಹ ಸಮಯ ನೋಡಿ ಮುಂಜಾನೆಯೇ ಮನೆಯಲ್ಲಿದ್ದ ನಗದು ಮತ್ತು ಆಭರಣಗಳೊಂದಿಗೆ ಎಸ್ಕೆಪ್ ಆಗುತ್ತಿದ್ದಳು.

ವಂಚನೆಗೊಳಗಾದ ಪತಿಯಂದಿರು ದೂರು ನೀಡಲು ಮುಂದಾದಾಗ ಅಸಲಿ ಸತ್ಯ ಹೊರಬಿದ್ದಿದೆ. ಈಕೆ ನೀಡಿದ್ದ ವಿಳಾಸ ಮತ್ತು ದಾಖಲೆಗಳೆಲ್ಲವೂ ನಕಲಿಯಾಗಿದ್ದವು. ಗ್ರಾಮೀಣ ಭಾಗದಲ್ಲಿ ಮದುವೆಯಾಗಲು ವಧು ಸಿಗದೆ ಕಷ್ಟಪಡುವ ಯುವಕರನ್ನು ಏಜೆಂಟರ ಮೂಲಕ ಸಂಪರ್ಕಿಸುತ್ತಿದ್ದ ಈಕೆ, ಭಾವನಾತ್ಮಕವಾಗಿ ಅವರನ್ನ ಮ್ಯಾನಿಪುಲೇಟ್ ಮಾಡುತ್ತಿದ್ದಳು. ಒಂದು ವೇಳೆ ಯಾರಾದರೂ ದೂರು ನೀಡಲು ಮುಂದಾದರೆ, ಅವರ ವಿರುದ್ಧವೇ ವರದಕ್ಷಿಣೆ ಕಿರುಕುಳ ಅಥವಾ ಲೈಂಗಿಕ ದೌರ್ಜನ್ಯದ ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಳು. ಇದರಿಂದಾಗಿ ಅನೇಕರು ಮರ್ಯಾದೆಗೆ ಅಂಜಿ ಸುಮ್ಮನಾಗಿದ್ದರು.

ಯವತ್ಮಾಲ್, ಬೀಡ್, ಲಾತೂರ್ ಮತ್ತು ಜಲ್ಮಾ ಜಿಲ್ಲೆಗಳಲ್ಲೂ ಇಂತಹ ಪ್ರಕರಣಗಳು ದಾಖಲಾಗಿದ್ದು, ಇದೊಂದು ದೊಡ್ಡ ಜಾಲವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮದುವೆ ಏಜೆಂಟರಿಗೆ ಲಕ್ಷಾಂತರ ರೂಪಾಯಿ ಹಣ ನೀಡಿ ವಂಚನೆಗೊಳಗಾದ ಕುಟುಂಬಗಳು ಈಗ ಕಂಗಾಲಾಗಿವೆ. ಈ ಘಟನೆಯ ಹಿನ್ನೆಲೆ, ಮದುವೆಗೆ ಮುನ್ನ ವಧು ಅಥವಾ ವರನ ಹಿನ್ನೆಲೆಯನ್ನು ಸರಿಯಾಗಿ ಪರಿಶೀಲಿಸದೆ ಮತ್ತು ಮಧ್ಯವರ್ತಿಗಳನ್ನು ಅಂಧವಾಗಿ ನಂಬಿ ಹಣ ನೀಡಬಾರದು ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.


Share with

Leave a Reply

Your email address will not be published. Required fields are marked *