ಮುಂಬಯಿ: ಮಹಾರಾಷ್ಟ್ರದ ನಾಸಿಕ್‌ನ ಪ್ರಮುಖ ಐಟಿ ಕಂಪನಿಯೊಂದರಲ್ಲಿ ಹಲವಾರು ಮಹಿಳಾ ಉದ್ಯೋಗಿಗಳ ಮೇಲೆ ಟೀಮ್ ಲೀಡರ್ ಗಳು ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ನೀಡಿ ಧಾರ್ಮಿಕ ಮತಾಂತರಕ್ಕೆ ಯತ್ನಿಸಿರುವ ಆರೋಪ ಕೇಳಿ ಬಂದ ನಂತರ ವಿವಾದ ಭುಗಿಲೆದ್ದು ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಮಹಾರಾಷ್ಟ್ರದ ಪೊಲೀಸ್ ಠಾಣೆಗಳಲ್ಲಿ ಹಲವು ಎಫ್‌ಐಆರ್‌ಗಳು ದಾಖಲಾಗಿದ್ದು, ಒಂದು ಅತ್ಯಾಚಾರದ ಪ್ರಕರಣವೂ ಒಳಗೊಂಡಿದೆ. ಪೊಲೀಸರು ಕನಿಷ್ಠ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ನಾಸಿಕ್ ಪ್ರಕರಣವು “ಕಾರ್ಪೊರೇಟ್ ಜಿಹಾದ್” ನ ಒಂದು ನಿದರ್ಶನ ಎಂದು ಬಿಜೆಪಿ ಆರೋಪ ಮಾಡಿದೆ. ಇನ್ನೊಂದೆಡೆ ಮಹಾರಾಷ್ಟ್ರ ಸರಕಾರವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಲ್ಲಾ ಆರೋಪಿಗಳಿಗೆ ಕಠಿನ ಸಜೆಯಾಗುವುದನ್ನು ಖಚಿತಪಡಿಸುವುದಾಗಿ ಹೇಳಿದೆ.
ಪೊಲೀಸರು ಎಸಿಪಿ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ 12 ಸದಸ್ಯರ ಎಸ್‌ಐಟಿಯನ್ನು ರಚಿಸಿದ್ದಾರೆ ಮತ್ತು ತನಿಖೆಯು ತಾಂತ್ರಿಕ ಮತ್ತು ಭೌತಿಕ ಪುರಾವೆಗಳನ್ನು ಆಧರಿಸಿದೆ ಎಂದು ಹೇಳಿದ್ದಾರೆ.
ಇನ್ನೊಂದೆಡೆ “ಯಾವುದೇ ರೀತಿಯ ಕಿರುಕುಳ ಮತ್ತು ಬಲವಂತದ ಬಗ್ಗೆ ಶೂನ್ಯ ಸಹಿಷ್ಣುತಾ ನೀತಿಯನ್ನು ಹೊಂದಿದ್ದೇವೆ. ನಾವು ಯಾವಾಗಲೂ ಕೆಲಸದ ಸ್ಥಳದಲ್ಲಿ ನಮ್ಮ ಉದ್ಯೋಗಿಗಳ ಸುರಕ್ಷತೆ ಮತ್ತು ಯೋಗಕ್ಷೇಮದ ಅತ್ಯುನ್ನತ ಮಾನದಂಡಗಳನ್ನು ಖಚಿತಪಡಿಸಿಕೊಂಡಿದ್ದೇವೆ. ನಾಸಿಕ್‌ನಲ್ಲಿ ಈ ವಿಷಯದ ಬಗ್ಗೆ ನಮಗೆ ತಿಳಿದ ತತ್ ಕ್ಷಣ, ತ್ವರಿತ ಕ್ರಮ ಕೈಗೊಂಡಿದ್ದೇವೆ” ಎಂದು ಕಂಪನಿ ಹೇಳಿಕೆ ನೀಡಿದೆ.
ಈಗಾಗಲೇ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಲ್ಲಿ ಹಲವರು ಟೀಮ್ ಲೀಡರ್ ಗಳು, ಎಂಜಿನಿಯರ್‌ಗಳಾಗಿದ್ದಾರೆ. ಇನ್ನು ಕೆಲವರನ್ನು ವಿಚಾರಣೆ ನಡೆಸಲಾಗುತ್ತಿದೆ.
ಬಂಧಿತರಲ್ಲಿ ಆಸಿಫ್ ಅನ್ಸಾರಿ, ಶಫಿ ಶೇಖ್, ಶಾರುಖ್ ಖುರೇಷಿ, ರಜಾ ಮೆಮನ್ ಮತ್ತು ತೌಸಿಫ್ ಅತ್ತರ್ ಸೇರಿದ್ದಾರೆ. ಮತ್ತೊಬ್ಬ ಉದ್ಯೋಗಿ ಅಶ್ವಿನ್ ಚೈನಾನಿ ಎಂಬವನನ್ನೂ ಬಂಧಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್ ಐ ವರದಿ ಮಾಡಿದೆ. ಪೊಲೀಸರು ಮತ್ತೊಬ್ಬ ಪ್ರಮುಖ ಆರೋಪಿ ಎಚ್ ಆರ್ ಅಧಿಕಾರಿಗಾಗಿ ಹುಡುಕಾಟ ನಡೆಸಿದ್ದಾರೆ.
ಮಹಿಳೆಯರಿಗೆ ಉದ್ಯೋಗ ಮತ್ತು ಉತ್ತಮ ಸಂಬಳದ ಭರವಸೆ ನೀಡಿ ನಮಾಜ್ ಮಾಡುವುದು, ಉಪವಾಸ ಆಚರಿಸಲು, ಗೋಮಾಂಸ ಸೇವಿಸಲೂ ಒತ್ತಾಯ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಶಿವಸೇನೆ (ಯುಬಿಟಿ) ನಾಯಕಿ, ಮಾಜಿ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಕೆಲಸದ ಸ್ಥಳದ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್ ನಲ್ಲಿ ಜಾಗ್ರತೆ ವಹಿಸಬೇಕಾಗಿದೆ: ಬಂಡಿ ಸಂಜಯ್
ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಇದನ್ನು ‘ನಾಸಿಕ್ ಕಾರ್ಪೊರೇಟ್ ಜಿಹಾದ್ ಪ್ರಕರಣ’ ಎಂದು ಉಲ್ಲೇಖಿಸಿದ್ದಾರೆ. ತೆಲಂಗಾಣದಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಐಟಿ ಉದ್ಯೋಗಿಗಳಿಗೆ ರಕ್ಷಣೆ ನೀಡಬೇಕೆಂದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ತಾಣದಲ್ಲಿ ಆಕ್ರೋಶ
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸಾಮಾಜಿಕ ತಾಣದಲ್ಲಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ವ್ಯಾಪಕ ಆಕ್ರೋಶ ಹೊರ ಹಾಕುತ್ತಿದ್ದಾರೆ.




