ಸಿಡ್ನಿ: ವಿಶ್ವ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ಲೆಗ್ ಸ್ಪಿನ್ನರ್ ಶೇನ್ ವಾರ್ನ್ (Shane Warne) ಅವರು ನಿಧನರಾಗಿ ನಾಲ್ಕು ವರ್ಷದ ನಂತರ ಇದಿಗ ಅವರ ನಿಧನದ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಕೋವಿಡ್ ವ್ಯಾಕ್ಸನ್ ಕಾರಣದಿಂದ ತಮ್ಮ ತಂದೆ ಮೃತಪಟ್ಟಿರಬಹುದು ಎಂದು ಶೇನ್ ವಾರ್ನ್ ಪುತ್ರ ಜಾಕ್ಸನ್ ಹೇಳಿಕೊಂಡಿದ್ದಾರೆ.

ವಾರ್ನ್ ನಿಧನಕ್ಕೆ ಬಹುಶಃ ಅವರು ಕೆಲಸಕ್ಕಾಗಿ ಬಲವಂತವಾಗಿ ತೆಗೆದುಕೊಳ್ಳಬೇಕಾದ ಮೂರು ಅಥವಾ ನಾಲ್ಕು”ಕೋವಿಡ್ ಲಸಿಕೆಗಳು ಕಾರಣ ಎಂದು ಹೇಳಿದ್ದಾರೆ.
ಪಾಡ್ಕ್ಯಾಸ್ಟ್ ಒಂದರಲ್ಲಿ ಮಾತನಾಡಿದ ಅವರು ತನ್ನ ತಂದೆಗೆ ಆರೋಗ್ಯ ಸಮಸ್ಯೆಗಳಿತ್ತು ಎಂದು ಒಪ್ಪಿಕೊಂಡರು. 2022ರಲ್ಲಿ 52 ವರ್ಷದವರಾಗಿದ್ದ ಶೇನ್ ವಾರ್ನ್ ಅವರು ಥೈಲ್ಯಾಂಡ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು.
“ಕೋವಿಡ್ ಲಸಿಕೆ ಕಾರಣವಾಗಿತ್ತು ಎಂದು ನಾನು ಖಂಡಿತವಾಗಿಯೂ ಭಾವಿಸುತ್ತೇನೆ. ಈಗ ಅದನ್ನು ಹೇಳುವುದು ವಿವಾದವಾಗಲಾರದು ಎಂದು ನಾನು ಭಾವಿಸುತ್ತೇನೆ” ಎಂದು ಜಾಕ್ಸನ್ ಹೇಳಿದರು.
”ತಂದೆ ಸಾವಿನ ಸುದ್ದಿ ತಿಳಿದ ತಕ್ಷಣ, ನಾನು ಫೋನ್ ಕಟ್ ಮಾಡಿದ ತಕ್ಷಣ, ಸರ್ಕಾರವನ್ನು ದೂಷಿಸಿದೆ. ನಾನು ತಕ್ಷಣ ಕೋವಿಡ್ ಮತ್ತು ಲಸಿಕೆಯನ್ನು ದೂಷಿಸಿದೆ” ಎಂದು ಜಾಕ್ಸನ್ ಹೇಳಿದರು.
“ಹೌದು, ಈ ಹಿಂದೆ ಬಹಳಷ್ಟು ಜನರು ಹೃದಯಾಘಾತದಿಂದ ಸಾಯುತ್ತಿದ್ದರು. ಆದರೆ ಅಪ್ಪ ಚೆನ್ನಾಗಿದ್ದರು, ಅವರು ಮೂರು ಅಥವಾ ನಾಲ್ಕು (ಲಸಿಕೆ ಡೋಸ್) ಪಡೆದಿರಬಹುದು ಎಂದು ನಾನು ಭಾವಿಸುತ್ತೇನೆ, ಅವರು ಅವುಗಳನ್ನು ಪಡೆಯಲು ಬಯಸಲಿಲ್ಲ, ಕೆಲಸಕ್ಕಾಗಿ ಅವುಗಳನ್ನು ಪಡೆಯುವಂತೆ ಒತ್ತಾಯಿಸಲಾಯಿತು. ಇತರರಂತೆ ಅವರೂ ಅವುಗಳನ್ನು ಪಡೆಯುವಂತೆ ಒತ್ತಾಯಿಸಲಾಯಿತು” ಎಂದು ಅವರು ಪ್ರತಿಪಾದಿಸಿದರು.
2021ರಲ್ಲಿ ಇಂಗ್ಲೆಂಡ್ ನಲ್ಲಿ ದಿ ಹಂಡ್ರೆಡ್ ನಲ್ಲಿ ಕೋಚ್ ಆಗಿದ್ದ ವೇಳೆ ಶೇನ್ ವಾರ್ನ್ ಅವರಿಗೆ ಕೋವಿಡ್ ಸೋಂಕು ತಾಗಿತ್ತು.




