ಕೋಲಾರ, ಏ.23: ಸಂಕಷ್ಟಗಳು ಎದುರಾದಾಗ ಎದೆಗುಂದದೆ ಹೋರಾಡಿದರೆ ಯಶಸ್ಸು ಖಂಡಿತ ಎಂಬ ಮಾತನ್ನು ಕೋಲಾರ ಜಿಲ್ಲೆಯ ಕುಸುಮಾ ನಿಜವಾಗಿಸಿದ್ದಾರೆ. ಆಂಬುಲೆನ್ಸ್ನಲ್ಲಿ ಬಂದು, ಸ್ಟ್ರೆಚರ್ ಮೇಲೆ ಮಲಗಿಯೇ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದ ಈ ಪ್ರತಿಭಾವಂತ ವಿದ್ಯಾರ್ಥಿನಿ ಇಂದು ಪ್ರಕಟವಾದ ಫಲಿತಾಂಶದಲ್ಲಿ ಉತ್ತಮ ಫಲಿತಾಂಶದಿಂದ ತೇರ್ಗಡೆಯಾಗುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಚಿನ್ನನಾಗಹಳ್ಳಿ ನಿವಾಸಿಯಾಗಿರುವ ಕುಸುಮಾ, ಪರೀಕ್ಷೆಯ ಸಮಯದಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಆದರೆ ಪರೀಕ್ಷೆ ತಪ್ಪಿಸಿಕೊಳ್ಳಬಾರದು ಎಂಬ ದೃಢ ಸಂಕಲ್ಪ ಮಾಡಿದ ಆಕೆ, ಆಂಬುಲೆನ್ಸ್ ಮೂಲಕ ಪರೀಕ್ಷಾ ಕೇಂದ್ರಕ್ಕೆ ಆಗಮಿಸುತ್ತಿದ್ದರು. ಎದ್ದುನಿಲ್ಲಲು ಸಾಧ್ಯವಾಗದ ಸ್ಥಿತಿಯಲ್ಲೂ ಸ್ಟ್ರೆಚರ್ ಮೇಲೆ ಮಲಗಿಕೊಂಡೇ ಪರೀಕ್ಷೆ ಬರೆದು ಎಲ್ಲರ ಗಮನ ಸೆಳೆದಿದ್ದರು.
ಇಂದು ಹೊರಬಂದ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶದಲ್ಲಿ ಕುಸುಮಾ 625 ಅಂಕಗಳಿಗೆ 374 ಅಂಕಗಳನ್ನು ಗಳಿಸಿದ್ದಾರೆ. ದೈಹಿಕ ಯಾತನೆಯ ನಡುವೆಯೂ ಆಕೆ ಗಳಿಸಿರುವ ಈ ಅಂಕಗಳು ಆಕೆಯ ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿವೆ. ಸದ್ಯ ಕುಸುಮಾ ಬೆಂಗಳೂರಿನ ವೈಟ್ ಫೀಲ್ಡ್ನ ಹಾಸ್ಟರ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಸುಮಾಳ ಈ ಅಸಾಧಾರಣ ಛಲಕ್ಕೆ ಕೋಲಾರದ ಶಿಕ್ಷಣ ಇಲಾಖೆ, ಸ್ಥಳೀಯ ಶಾಸಕಿ ಮತ್ತು ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಿದ್ದವು. ವಿಶೇಷವಾಗಿ ಮಾಜಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಕುಸುಮಾಳ ಬೆಂಬಲಕ್ಕೆ ನಿಂತು, ಆಕೆಗೆ ಬೇಕಾದ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.





