ಅಹಮದಾಬಾದ್: ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 15 ಮುನ್ಸಿಪಲ್ ಕಾರ್ಪೊರೇಷನ್‌ಗಳ ಜತೆಗೆ ಬಿಜೆಪಿ ಬಹುತೇಕ ಸ್ಥಾನಗಳನ್ನು ಗೆದ್ದಿದ್ದು, ಮುಂದಿನ ವರ್ಷದ ವಿಧಾನಸಭೆ ಚುನಾವಣೆಗೂ ಮುನ್ನ ಬಲಪ್ರದರ್ಶನ ನಡೆಸಿದೆ.

ಕಾಂಗ್ರೆಸ್ ನೆಲಕಚ್ಚಿದ್ದರೆ, ಆಪ್ ತನ್ನ ವಿಸ್ತಾರವನ್ನು ತುಸು ಹೆಚ್ಚಿಸಿಕೊಂಡಿದೆ.
15 ಮುನ್ಸಿಪಲ್ ಕಾರ್ಪೊರೇಷನ್, 84 ಪುರಸಭೆ, 34 ಜಿಲ್ಲಾ ಪಂಚಾಯತ್, 260 ತಾಲೂಕು ಪಂಚಾಯತ್‌ಗಳಿಗೆ ಚುನಾವಣೆ ನಡೆದಿತ್ತು. ಇದರಲ್ಲಿ 15 ಮುನ್ಸಿಪಲ್ ಕಾರ್ಪೊರೇಷನ್‌ಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. ಒಟ್ಟಾರೆ 10050 ಸ್ಥಾನಗಳಲ್ಲಿ 732ಕ್ಕೆ ಅವಿರೋಧ ಆಯ್ಕೆ ನಡೆದಿತ್ತು. ಉಳಿದ ಸ್ಥಾನಗಳಲ್ಲಿ 6472 ಸ್ಥಾನಗಳನ್ನು ಬಿಜೆಪಿ ಗೆದ್ದಿದೆ.
ಬಹುತೇಕ ಕಡೆ ಬಿಜೆಪಿ ಶೇ.50ಕ್ಕಿಂತ ಹೆಚ್ಚು ಸ್ಥಾನ ಗಳಿಸಿದೆ. ಕಾಂಗ್ರೆಸ್ ಭದ್ರಕೋಟೆಯಾದ ಗ್ರಾಮೀಣ ಭಾಗಗಳಲ್ಲೂ ಬಿಜೆಪಿ ಪ್ರಭಾವ ಬೀರಿದ್ದು, 1090 ಜಿಲ್ಲಾ ಪಂಚಾಯತ್ ಸ್ಥಾನಗಳಲ್ಲಿ 569 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ.
ಮೋದಿ ಸಂತಸ: ಈ ಚುನಾವಣೆ ಬಳಿಕ ಬಿಜೆಪಿ, ಗುಜರಾತ್ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ತಾಲೂಕು, ಜಿಲ್ಲಾ ಪಂಚಾಯತ್ ಗೆಲ್ಲಲು ಕಾರಣವಾದ ಮತದಾರರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.




