ಕಾರ್ಕಳ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವನ್ಯಜೀವಿ ವಿಭಾಗದ ಅಳದಂಗಡಿ ವ್ಯಾಪ್ತಿ ಗುಡ್ಡದ ತಪ್ಪಲಿನಲ್ಲಿ ಶನಿವಾರ(ಮೇ2)ಸಂಜೆ ವೇಳೆ ಭಾರಿ ಕಾಡಿಚ್ಚು ಕಾಣಿಸಿಕೊಂಡಿದ್ದು, ನೂರಾರು ಎಕರೆ ಅರಣ್ಯ ಪ್ರದೇಶಕ್ಕೆ ಬೆಂಕಿ ವ್ಯಾಪಿಸುವ ಆತಂಕ ಎದುರಾಗಿದೆ.

ಅಳದಂಗಡಿ ಪೇಟೆಯಿಂದಲೂ ಬೆಂಕಿಯ ತೀವ್ರತೆ ಗೋಚರಿಸುತ್ತಿದ್ದು, ಸ್ಥಳೀಯರು ಹಾಗೂ ಪ್ರಯಾಣಿಕರಲ್ಲಿ ಭೀತಿ ಮೂಡಿಸಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ತೀವ್ರಗತಿಯಲ್ಲಿ ಸಾಗಿದೆ. “ಪರಿಸ್ಥಿತಿಯನ್ನು ಹತೋಟಿಗೆ ತರಲು ಇಲಾಖೆ ಶ್ರಮಿಸುತ್ತಿದೆ” ಎಂದು ಡಿಎಫ್‌ಒ ಶಿವರಾಮ್ ಬಾಬು ತಿಳಿಸಿದ್ದಾರೆ.




