ಶಿಶಿಲ: ಮತ್ಸ್ಯ ತೀರ್ಥ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ಶಿಶಿಲೇಶ್ವರ ದೇವಸ್ಥಾನದ ಸಮೀಪದ ಬರ್ಗುಳ ಕಿಂಡಿ ಆಣೆಕಟ್ಟು ಬಳಿ ಕಿಡಿಗೇಡಿಗಳು ಕಾಪರ್ ಸಲ್ಫೇಟ್ (ಮೈಲ್ ಸುತ್ತು) ಬಳಸಿ ಮೀನು ಹಿಡಿಯಲು ಯತ್ನಿಸಿದ ಪರಿಣಾಮ ಸಾವಿರಾರು ಮೀನುಗಳು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.ಮೇ 29ರ ರಾತ್ರಿ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯರು ನದಿ ತೀರದಲ್ಲಿ ಸಂಚರಿಸುವ ವೇಳೆ ಸತ್ತು ಬಿದ್ದ ಹಾಗೂ ತೇಲುತ್ತಿದ್ದ ಮೀನುಗಳನ್ನು ಗಮನಿಸಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದಾರೆ.

ಮೀನು ಹಿಡಿಯಲು ಬಳಸಿದ ವಿಷಕಾರಿ ರಾಸಾಯನಿಕದ ಪರಿಣಾಮವಾಗಿ ಸಣ್ಣಪುಟ್ಟ ಮೀನುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದು, ಅವುಗಳನ್ನು ಅಲ್ಲಿಯೇ ಬಿಟ್ಟು ಹೋಗಿರುವುದು ಕಂಡುಬಂದಿದೆ.ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಪ್ರಮುಖರಾದ ಕರುಣಾಕರ ಶಿಶಿಲ, ಮನೋಜ್, ಉಮೇಶ್, ಲೋಕೇಶ್ ಅಡ್ಡಹಳ್ಳ ಹಾಗೂ ಪುರುಷೋತ್ತಮ್ ಅಡ್ಡಹಳ್ಳ ಅವರು ಪರಿಸ್ಥಿತಿಯನ್ನು ಪರಿಶೀಲಿಸಿದರು. ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಮೀನುಗಾರಿಕಾ ಇಲಾಖೆಗೆ ಮಾಹಿತಿ ನೀಡಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ.ಶಿಶಿಲೇಶ್ವರ ದೇವಸ್ಥಾನದ ಸುತ್ತಮುತ್ತ ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೀನುಗಾರಿಕೆಗೆ ಅವಕಾಶವಿಲ್ಲ.
ಈ ಹಿಂದೆ ಇದೇ ಪ್ರದೇಶದಲ್ಲಿ ನಡೆದಿದ್ದ ಮೀನುಗಳ ಮಾರಣಹೋಮದ ಘಟನೆ ಜನರ ಮನಸ್ಸಿನಲ್ಲಿ ಇನ್ನೂ ಹಸಿರಾಗಿರುವಾಗ ಮತ್ತೊಮ್ಮೆ ಇಂತಹ ದುರ್ಘಟನೆ ಸಂಭವಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.ಪರಿಸರ ಹಾಗೂ ಜಲಚರ ಜೀವಸಂಕುಲಕ್ಕೆ ಹಾನಿಯುಂಟುಮಾಡುವ ಇಂತಹ ಕೃತ್ಯಗಳನ್ನು ತಡೆಗಟ್ಟಲು ಸಂಬಂಧಪಟ್ಟ ಇಲಾಖೆ ತಕ್ಷಣ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.




