ಮೈದಾನದಲ್ಲೇ ಕುಸಿದು ಬಿದ್ದ ಖ್ಯಾತ ಫುಟ್ಬಾಲ್ ಪ್ಲೇಯರ್..! ಪಂದ್ಯ ರದ್ದು..!!

Share with

ಕೊಪನ್ಹೇಗನ್:ಯೂರೋ 2021ರ ಟೂರ್ನಿಯ ವೇಳೆ ಮೈದಾನದಲ್ಲೇ ಹೃದಯಸ್ತಂಭನಕ್ಕೊಳಗಾಗಿ ಸಾವಿನ ದವಡೆಯಿಂದ ಪಾರಾಗಿದ್ದ ಡೆನ್ಮಾರ್ಕ್‌ನ ಖ್ಯಾತ ಮಿಡ್‌ಫೀಲ್ಡರ್ ಕ್ರಿಶ್ಚಿಯನ್ ಎರಿಕ್ಸನ್, ಭಾನುವಾರ ನಡೆದ ಉಕ್ರೇನ್ ವಿರುದ್ಧದ ಅಂತಾರಾಷ್ಟ್ರೀಯ ಸೌಹಾರ್ದ ಪಂದ್ಯದ ವೇಳೆ ಮತ್ತೊಮ್ಮೆ ಮೈದಾನದಲ್ಲೇ ಹಠಾತ್ ಕುಸಿದು ಬಿದ್ದಿದ್ದಾರೆ. ಈ ಘಟನೆಯಿಂದಾಗಿ ಪಂದ್ಯವನ್ನು ಅರ್ಧಕ್ಕೆ ರದ್ದುಗೊಳಿಸಲಾಗಿದ್ದು, ಫುಟ್‌ಬಾಲ್ ಜಗತ್ತು ಮತ್ತೊಮ್ಮೆ ಆತಂಕಕ್ಕೊಳಗಾಗಿದೆ.

ಉಕ್ರೇನ್ ವಿರುದ್ಧದ ಪಂದ್ಯದ 79ನೇ ನಿಮಿಷದಲ್ಲಿ ಆಡುತ್ತಿದ್ದ 34 ವರ್ಷದ ಎರಿಕ್ಸನ್, ಇದ್ದಕ್ಕಿದ್ದಂತೆ ತಮ್ಮ ಎದೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಮೈದಾನದ ನೆಲಕ್ಕೆ ಕುಸಿದು ಬಿದ್ದರು. ಇದನ್ನು ಕಂಡು ಸಹ ಆಟಗಾರರು ಹಾಗೂ ಅಂಪೈರ್‌ಗಳು ತಕ್ಷಣವೇ ಆತಂಕ ವ್ಯಕ್ತಪಡಿಸಿ ವೈದ್ಯಕೀಯ ತಂಡವನ್ನು ಮೈದಾನಕ್ಕೆ ಕರೆದರು. ತಕ್ಷಣವೇ ಕಾರ್ಯಪ್ರವೃತ್ತರಾದ ವೈದ್ಯರು ಮೈದಾನದಲ್ಲೇ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ಆರಂಭಿಸಿದರು. ಆ ಸಮಯದಲ್ಲಿ ಡೆನ್ಮಾರ್ಕ್ ತಂಡವು 2-1 ಗೋಲುಗಳ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ, ಆಟಗಾರರ ತೀವ್ರ ಆತಂಕದ ಹಿನ್ನೆಲೆಯಲ್ಲಿ ಪಂದ್ಯವನ್ನು ಅಲ್ಲಿಗೇ ಕೈಬಿಡಲಾಯಿತು.

ಸದ್ಯದ ಆರೋಗ್ಯ ಸ್ಥಿತಿ ಸ್ಥಿರ

ಘಟನೆಯ ನಂತರ ಡೆನ್ಮಾರ್ಕ್ ಫುಟ್‌ಬಾಲ್ ಫೆಡರೇಶನ್ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಎರಿಕ್ಸನ್ ಸದ್ಯ ಪ್ರಜ್ಞಾವಸ್ಥೆಯಲ್ಲಿದ್ದಾರೆ ಮತ್ತು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಖಚಿತಪಡಿಸಿದೆ. ಪ್ರಾಥಮಿಕ ಚಿಕಿತ್ಸೆಯ ನಂತರ ಪ್ರಜ್ಞೆ ಮರಳಿ ಪಡೆದ ಅವರು, ತಾವಾಗಿಯೇ ನಡೆದುಕೊಂಡು ಮೈದಾನದಿಂದ ಹೊರನಡೆದಿದ್ದಾರೆ. ತದನಂತರ ಅವರನ್ನು ಹೆಚ್ಚಿನ ತಪಾಸಣೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.


Share with

Leave a Reply

Your email address will not be published. Required fields are marked *