ನಿತ್ಯ ಕನಿಷ್ಠ 30 ನಿಮಿಷವಾದರೂ ಪ್ರಸಾರ ಮಾಡ್ಲೆಬೇಕು: ಕೇಂದ್ರ

ನವದೆಹಲಿ: ದೇಶದ ದೂರದರ್ಶನ ಮತ್ತು ರೇಡಿಯೋ ಪ್ರಸಾರ ಸೇವೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು, ಈ ಎರಡೂ ಮಾಧ್ಯಮಗಳಿಗೆ ಒಂದೇ ನಿಯಂತ್ರಣ ವ್ಯವಸ್ಥೆಯನ್ನು (ಸಿಂಗಲ್ ರೆಗ್ಯುಲೇಟರಿ ಪ್ರೇಮ್ವರ್ಕ್) ಜಾರಿಗೆ ತರಲು ಮುಂದಾಗಿದೆ.
ಈವರೆಗೆ ಕೇವಲ ಟೀವಿ ಚಾನೆಲ್ಗಳಿಗೆ ಮಾತ್ರ ಸೀಮಿತವಾಗಿದ್ದ ‘ರಾಷ್ಟ್ರೀಯ ಮಹತ್ವ ಹಾಗೂ ಸಾಮಾಜಿಕ ಕಾಳಜಿಯ’ ಕಾರ್ಯಕ್ರಮಗಳ ಪ್ರಸಾರದ ನಿಯಮವನ್ನು ಇನ್ಮುಂದೆ ಖಾಸಗಿ ರೇಡಿಯೋ ಸೇವೆಗಳಿಗೂ ವಿಸ್ತರಿಸಲು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮುಂದಾಗಿದೆ.
ಹೊಸ ಪ್ರಸ್ತಾಪದ ಪ್ರಕಾರ, ಎಲ್ಲ ಅಧಿಕೃತ ಟಿವಿ ಚಾನೆಲ್ಗಳು ಪ್ರತಿದಿನ ಬೆಳಗ್ಗೆ 6ರಿಂದ ರಾತ್ರಿ 11ರ ಅವಧಿಯಲ್ಲಿ ಕನಿಷ್ಠ 30 ನಿಮಿಷಗಳ ಕಾಲ ದೇಶದ ಹಿತಾಸಕ್ತಿ ಹಾಗೂ ಸಾಮಾಜಿಕ ಜಾಗೃತಿಯ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಪ್ರಸಾರ ಮಾಡಬೇಕು. ಇದೇ ವೇಳೆ ಖಾಸಗಿ ರೇಡಿಯೋ ಚಾನೆಲ್ಗಳು ಇಂತಹ ಸಾಮಾಜಿಕ ಕಾಳಜಿಯ ವಿಷಯಗಳಿಗೆ ಪ್ರತಿದಿನ ಕನಿಷ್ಠ ಒಂದು ಗಂಟೆಯ ಸಮಯ ಮೀಸಲಿಡಬೇಕು ಎಂದು ಕರಡು ವರದಿಯಲ್ಲಿ ಉಲ್ಲೇಖಿಸಲಾಗಿದೆ.




