ಬಾಲ್ಯವಿವಾಹ ತಡೆಗೆ ಕಟ್ಟುನಿಟ್ಟಿನ ನಿಯಮ ಜಾರಿ..!

Share with

ಬಾಲ್ಯ ವಿವಾಹ ಮುಕ್ತ ರಾಜ್ಯ ನಿರ್ಮಾಣಕ್ಕಾಗಿ ಕರ್ನಾಟಕ ಸರಕಾರವು ಕೇಂದ್ರದ ಕಾಯ್ದೆಗೆ ಮಹತ್ವದ ತಿದ್ದುಪಡಿ ತಂದು, ದೇಶದಲ್ಲೇ ಅತ್ಯಂತ ಕಠಿನ ಕಾನೂನು ಜಾರಿಗೊಳಿಸಿದೆ. ಹೊಸ ನಿಯಮದಂತೆ ಅಪ್ರಾಪ್ತರಿಗೆ ನಿಶ್ಚಿತಾರ್ಥ ಮಾಡುವುದು ಅಥವಾ ಅದಕ್ಕೆ ಸಿದ್ಧತೆ ನಡೆಸುವುದು ಕೂಡ ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹ ನಿಶ್ಚಿತಾರ್ಥಗಳನ್ನು ಕಾನೂನುಬಾಹಿರ ಎಂದು ಘೋಷಿಸಲಾಗಿದೆ.

ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ನೀಡುವ ಪೋಷಕರು, ಸಂಬಂಧಿಕರು ಹಾಗೂ ಸಾಕ್ಷಿಯಾಗುವವರಿಗೆ ಕನಿಷ್ಠ 2 ವರ್ಷ ಕಠಿನ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಇದನ್ನು ಜಾಮೀನು ರಹಿತ ಅಪರಾಧವೆಂದು ಪರಿಗಣಿಸಲಾಗಿದೆ.

ಸಾಮೂಹಿಕ ಹೊಣೆಗಾರಿಕೆ

ಕಠಿನ ಕ್ರಮಗಳು: ನಿಷೇಧ ಅಧಿಕಾರಿಗಳ ನೇಮಕ: ಪಿಡಿಒ, ಗ್ರಾಮ ಆಡಳಿತ ಅಧಿಕಾರಿಗಳು, ಶಾಲಾ ಮುಖ್ಯ ಶಿಕ್ಷಕರು ಮತ್ತು ಅಂಗನವಾಡಿ ಕಾರ್ಯಕರ್ತೆಯರನ್ನು ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.

ಶಾಲೆಗಳ ಜವಾಬ್ದಾರಿ: ಮಗು ಸತತ 3 ದಿನ ಗೈರಾದರೆ ಶಿಕ್ಷಕರು ಕಡ್ಡಾಯವಾಗಿ ಮನೆಗೆ ಭೇಟಿ ನೀಡಿ ಮಾಹಿತಿ ಪಡೆಯಬೇಕು.

ಸಂಸ್ಥೆಗಳ ಮೇಲೆ ಕ್ರಮ

ಕಲ್ಯಾಣ ಮಂಟಪಗಳು, ದೇವಸ್ಥಾನ, ಮಸೀದಿ, ಚರ್ಚ್ ಗಳು ವಧು-ವರರ ವಯಸ್ಸಿನ ದಾಖಲೆ (ಎಸೆಸೆಲ್ಸಿ ಅಂಕಪಟ್ಟಿ/ಜನನ ಪ್ರಮಾಣಪತ್ರ) ಪರಿಶೀಲಿಸುವುದು ಕಡ್ಡಾಯ. ಉಲ್ಲಂಘಿಸಿದರೆ ಮಾಲಕರು, ಮುದ್ರಕರು ಹಾಗೂ ಧಾರ್ಮಿಕ ಮುಖಂಡರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗುತ್ತದೆ.

ಆತಂಕಕಾರಿ ಅಂಕಿ ಅಂಶ

ರಾಜ್ಯದಲ್ಲಿ ಬಾಲ್ಯ ವಿವಾಹ ಪ್ರಕರಣಗಳು 2020ರಲ್ಲಿ 2,290 ಇದ್ದದ್ದು, 2024ರ ವೇಳೆಗೆ 3,127ಕ್ಕೆ ಏರಿಕೆಯಾಗಿದೆ. ಆದರೆ ಅಪರಾಧಿಗಳಿಗೆ ಶಿಕ್ಷೆಯಾಗುತ್ತಿರುವ ಪ್ರಮಾಣ ಅತ್ಯಂತ ಕನಿಷ್ಠವಾಗಿದೆ.

ಬಾಲ್ಯ ವಿವಾಹ ನಿರ್ಮೂಲನೆ ಸರಕಾರದ ಜವಾಬ್ದಾರಿ ಜತೆಗೆ ಸಮಾಜದ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಪ್ರಕಟನೆ ತಿಳಿಸಿದೆ.

ತಂತ್ರಜ್ಞಾನ, ದೂರು ಸಲ್ಲಿಕೆ

ಬಾಲ್ಯ ವಿವಾಹದ ಮಾಹಿತಿ ಸಿಕ್ಕಿದ ತತ್‌ಕ್ಷಣ ಸಾರ್ವಜನಿಕರು 1098 (ಮಕ್ಕಳ ಸಹಾಯವಾಣಿ) ಅಥವಾ 181 (ಮಹಿಳಾ ಸಹಾಯವಾಣಿ) ಗೆ ಕರೆ ಮಾಡಬಹುದು. ಮಾಹಿತಿ ನೀಡುವವರ ವಿವರಗಳನ್ನು ಗೌಪ್ಯವಾಗಿಡಲಾಗುತ್ತದೆ. ನ್ಯಾಯಾಲಯದಿಂದ ತುರ್ತು ತಡೆಯಾಜ್ಞೆ ತಂದು ಮದುವೆ ತಡೆಯುವ ಅಧಿಕಾರ ಅಧಿಕಾರಿಗಳಿಗಿದ್ದು, ರಕ್ಷಿಸಲ್ಪಟ್ಟ ಮಕ್ಕಳ ಪುನರ್ವಸತಿಯನ್ನು ಸರಕಾರವೇ ನೋಡಿಕೊಳ್ಳುತ್ತದೆ.


Share with

Leave a Reply

Your email address will not be published. Required fields are marked *