ಕೇವಲ 24ವಾರಗಳಲ್ಲಿ 25ಕೆಜಿ ತೂಕ ಇಳಿಸಿಕೊಂಡ ಫಿಟ್ನೆಸ್ ತಜ್ಞ..!

Share with

ನವದೆಹಲಿ: ಕಠಿಣ ಡಯೆಟ್ ಅಥವಾ ಉಪವಾಸ ಮಾಡದೆಯೇ ಕೇವಲ 24 ವಾರಗಳಲ್ಲಿ ಬರೋಬ್ಬರಿ 25 ಕೆಜಿ ತೂಕ ಇಳಿಸಿಕೊಂಡು ದಕ್ಷಿಣ ಏಷ್ಯಾದ ಪ್ರಖ್ಯಾತ ಫಿಟ್‌ನೆಸ್‌ ತಜ್ಞ ಜೀ ಅಲಿ ಅವರು ಎಲ್ಲರ ಗಮನ ಸೆಳೆದಿದ್ದಾರೆ.

ತಮ್ಮ 46ನೇ ವಯಸ್ಸಿನಲ್ಲಿ 101ಕೆಜಿಯಿಂದ 76 ಕೆಜಿಗೆ ತೂಕ ಇಳಿಸಿಕೊಳ್ಳುವ ಮೂಲಕ ದೇಹವನ್ನು ಸಂಪೂರ್ಣವಾಗಿ ಪರಿವರ್ತಿಸಿಕೊಂಡಿರುವ ಇವರು, ತಮ್ಮ ಈ ಯಶಸ್ಸಿನ ಹಿಂದಿನ ಮೂರು ಸರಳ ಸೂತ್ರಗಳನ್ನು ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ.

ಪೌಷ್ಟಿಕ ಆಹಾರ, ಉತ್ತಮ ನಿದ್ದೆ ಹಾಗೂ ದೇಹವನ್ನು ಹೈಡ್ರೆಟ್ ಆಗಿಟ್ಟುಕೊಳ್ಳುವ ಸುಲಭ ಅಭ್ಯಾಸಗಳೇ ತಮ್ಮ ಯಶಸ್ಸಿನ ರಹಸ್ಯ ಎಂದು ಜೀ ಅಲಿ ತಿಳಿಸಿದ್ದಾರೆ. ಅವರು ಹಂಚಿಕೊಂಡಿರುವ ಆ 3 ಮುಖ್ಯ ಸೂತ್ರಗಳು ಇಲ್ಲಿವೆ…

ದಿನಕ್ಕೆ 180-200 ಗ್ರಾಂ ಪ್ರೊಟೀನ್ ಸೇವನೆ

    ತೂಕ ಇಳಿಸುವ ಪ್ರಕ್ರಿಯೆಯಲ್ಲಿ ಜೀ ಅಲಿ ಅವರು ಕ್ಯಾಲೊರಿಗಳ ಪ್ರಮಾಣವನ್ನು ಕಡಿಮೆ ಮಾಡಿದರೂ, ಪ್ರೊಟೀನ್ ಸೇವನೆಯನ್ನು ಮಾತ್ರ ಕಡಿಮೆ ಮಾಡಲಿಲ್ಲ. ದಿನಕ್ಕೆ ಕನಿಷ್ಠ 180 ರಿಂದ 200 ಗ್ರಾಂ ಪ್ರೊಟೀನ್ ಸೇವಿಸುತ್ತಿದ್ದರು. “ಇದು ನನ್ನ ದೇಹದ ಸ್ನಾಯುಗಳನ್ನು (Muscle) ಬಲಪಡಿಸಲು, ಅನಗತ್ಯ ಹಸಿವನ್ನು ನಿಯಂತ್ರಿಸಲು ಹಾಗೂ ಮೆಟಬಾಲಿಸಂ ಹೆಚ್ಚಿಸಿ ಹೊಟ್ಟೆಯ ಕೊಬ್ಬನ್ನು ವೇಗವಾಗಿ ಕರಗಿಸಲು ಸಹಾಯ ಮಾಡಿತು ಎಂದು ಅವರು ಬರೆದುಕೊಂಡಿದ್ದಾರೆ.

    ಪಕ್ಕಾ ಪ್ಲಾನಿಂಗ್ ಮತ್ತು ದಿನಚರಿ

      ಯಾವುದೇ ಕೆಲಸದಲ್ಲಿ ಯಶಸ್ಸು ಸಿಗಬೇಕಾದರೆ ನಿರಂತರತೆ ಮುಖ್ಯ. ಜೀ ಅಲಿ ಅವರು ತಮ್ಮ ಜಿಮ್ ವರ್ಕೌಟ್, ಊಟದ ಸಮಯ, ನಡಿಗೆ (Walk) ಹಾಗೂ ಮಲಗುವ ಸಮಯವನ್ನು ಮುಂಚಿತವಾಗಿಯೇ ಡೈರಿಯಲ್ಲಿ ಬರೆದು ಯೋಜಿಸುತ್ತಿದ್ದರು. “ಮುಂಚಿತವಾಗಿ ದಿನಚರಿಯನ್ನು ಯೋಜಿಸುವುದರಿಂದ ನೆಪಗಳನ್ನು ಹೇಳಲು ಅವಕಾಶವಿರುವುದಿಲ್ಲ. ಪೆನ್ ಮತ್ತು ಪೇಪರ್ ಬಳಸಿ ದಿನದ ಕೆಲಸಗಳನ್ನು ನಿರ್ಧರಿಸುವುದು ನಮಗೆ ನಮ್ಮ ಜೀವನದ ಮೇಲೆ ನಿಯಂತ್ರಣ ನೀಡುತ್ತದೆ ಎಂಬುದು ಅವರ ಅಭಿಪ್ರಾಯ.

      ನಿಗದಿತ ನಿದ್ದೆ ಮತ್ತು ಸಮರ್ಪಕ ನೀರು

        ತೂಕ ಇಳಿಕೆಯಲ್ಲಿ ನಿದ್ದೆ ಮತ್ತು ನೀರು ಅತ್ಯಂತ ಶಕ್ತಿಶಾಲಿ ಅಸ್ತ್ರಗಳು ಎನ್ನುತ್ತಾರೆ ಜೀ. ಅವರು ಪ್ರತಿದಿನ ರಾತ್ರಿ 10:30 ರೊಳಗೆ ಮಲಗುತ್ತಿದ್ದರು ಮತ್ತು ದಿನಕ್ಕೆ 3 ರಿಂದ 4 ಲೀಟ‌ರ್ ನೀರು ಕುಡಿಯುತ್ತಿದ್ದರು. ನಿಯಮಿತ ನಿದ್ದೆಯಿಂದ ದೇಹದಲ್ಲಿ ಹೆಚ್ಚಿನ ಶಕ್ತಿ ಇರುತ್ತದೆ ಮತ್ತು ನೀರು ಕುಡಿಯುವುದರಿಂದ ಪದೇ ಪದೇ ಹಸಿವಾಗುವುದು ತಪ್ಪುತ್ತದೆ.

        “ಯಾವುದೇ ಕಠಿಣ ಉಪವಾಸವಿಲ್ಲದೇ, ದಿನವೂ ಸರಳವಾದ ಈ ನಿಯಮಗಳನ್ನು ಪಾಲಿಸುವ ಮೂಲಕ 46ನೇ ವಯಸ್ಸಿನಲ್ಲಿ ನಾನು ಹೆಚ್ಚು ಫಿಟ್, ಆರೋಗ್ಯವಂತ ಮತ್ತು ಸಂತೋಷವಾಗಿದ್ದೇನೆ,” ಎಂದು ಜೀ ಅಲಿ ಯುವ ಪೀಳಿಗೆಗೆ ಸ್ಫೂರ್ತಿ ತುಂಬಿದ್ದಾರೆ.


        Share with

        Leave a Reply

        Your email address will not be published. Required fields are marked *