ಕಾಸರಗೋಡು: 18 ವರ್ಷದ ಯುವಕನಿಗೆ ಅಮೀಬಿಕ್ ಸೋಂಕು ತಗುಲಿರುವ ಶಂಕೆ

Share with

ಕಾಸರಗೋಡು: ಜಿಲ್ಲೆಯ ಅಂಬಲತ್ತರ ನಿವಾಸಿಯಾಗಿರುವ 18 ವರ್ಷದ ಯುವಕನಿಗೆ ಅಮೀಬಿಕ್ ಎನ್ಸೆಫಾಲಿಟಿಸ್ ತಗಲಿರುವ ಶಂಕೆ ವ್ಯಕ್ತವಾಗಿದೆ.

ಈ ಕುರಿತು ರೋಗಿ ದಾಖಲಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಲಾಗಿದೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಅಧಿಕೃತ ದೃಢೀಕರಣ ದೊರೆತಿಲ್ಲ ಎಂದು ಕಾಸರಗೋಡು ಜಿಲ್ಲಾ ವೈದ್ಯಾಧಿಕಾರಿ ಡಾ. ಸಂತೋಷ್ ಕುಮಾರ್ ತಿಳಿಸಿದ್ದಾರೆ.

ಜ್ವರದಿಂದ ಬಳಲುತ್ತಿದ್ದ ಯುವಕ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪ್ರಕರಣ ಇನ್ನೂ ದೃಢಪಟ್ಟಿಲ್ಲದಿದ್ದರೂ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೋಂಕು ಶಂಕಿತ ಯುವಕನ ಮನೆ ಮತ್ತು ಸುತ್ತಮುತ್ತಲಿನ ನಿವಾಸಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಜೊತೆಗೆ, ಸೋಂಕಿನ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುವಂತೆ ಸ್ಥಳೀಯರಿಗೆ ಮನವಿ ಮಾಡಿದ್ದಾರೆ.

ಸೋಂಕಿನ ಸಾಮಾನ್ಯ ಲಕ್ಷಣಗಳು:
ತೀವ್ರ ಜ್ವರ
ತೀವ್ರ ತಲೆನೋವು
ವಾಂತಿ ಅಥವಾ ವಾಕರಿಕೆ
ಕುತ್ತಿಗೆ ಬಿಗಿಯಾಗುವುದು
ಬೆಳಕನ್ನು ನೋಡಲು ತೊಂದರೆ
ಗೊಂದಲ ಅಥವಾ ಅಸಹಜ ವರ್ತನೆ
ಸಮತೋಲನ ಕಳೆದುಕೊಳ್ಳುವುದು
ನಿದ್ರಾಮಗ್ನತೆ
ಅಪಸ್ಮಾರ (Fits/Seizures)
ಪ್ರಜ್ಞೆ ತಪ್ಪುವುದು (ತೀವ್ರ ಹಂತದಲ್ಲಿ)

ಈ ಲಕ್ಷಣಗಳು ಸಾಮಾನ್ಯವಾಗಿ ಸೋಂಕು ತಗುಲಿದ 1–12 ದಿನಗಳೊಳಗೆ ಕಾಣಿಸಿಕೊಳ್ಳಬಹುದು ಮತ್ತು ಬೇಗ ಗಂಭೀರವಾಗಬಹುದು.

ಯಾವಾಗ ತಕ್ಷಣ ಆಸ್ಪತ್ರೆಗೆ ಹೋಗಬೇಕು? ಇತ್ತೀಚೆಗೆ ಕೆರೆ, ನದಿ ಅಥವಾ ಶುದ್ಧೀಕರಿಸದ ಸಿಹಿನೀರಿನಲ್ಲಿ ಈಜಿದ ಬಳಿಕ ಜ್ವರ, ತೀವ್ರ ತಲೆನೋವು, ವಾಂತಿ ಅಥವಾ ಕುತ್ತಿಗೆ ಬಿಗಿಯಾಗುವಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ. ಬೇಗ ಚಿಕಿತ್ಸೆ ಆರಂಭಿಸುವುದು ಅತ್ಯಂತ ಮುಖ್ಯ.

ಗಮನಿಸಿ: ಈ ಸೋಂಕು ಅತ್ಯಂತ ಅಪರೂಪದದ್ದು. ಇದು ಸಾಮಾನ್ಯವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ; ಮೂಗಿನ ಮೂಲಕ ಕಲುಷಿತ ಸಿಹಿನೀರು ಪ್ರವೇಶಿಸಿದಾಗ ಸೋಂಕಿನ ಅಪಾಯ ಉಂಟಾಗುತ್ತದೆ.


Share with

Leave a Reply

Your email address will not be published. Required fields are marked *