18ನೇ ವಯಸ್ಸಿನಲ್ಲೇ ಕಾಲೇಜು ಪ್ರೊಫೆಸರ್ ಆಗಿ ವಿಶ್ವ ದಾಖಲೆ ಬರೆದ ಯುವಕ

Share with

ಸಾಮಾನ್ಯವಾಗಿ ಯುವಕರು ತಮ್ಮ 18ನೇ ವಯಸ್ಸಿನಲ್ಲಿ ಕಾಲೇಜು ಶಿಕ್ಷಣವನ್ನು ಪ್ರಾರಂಭಿಸುತ್ತಾರೆ. ಆದರೆ, ಅಮೆರಿಕದ ಫ್ಲೋರಿಡಾ ನಿವಾಸಿ ನಾಥನ್ ಥಾಮಸ್ ಇದೇ ವಯಸ್ಸಿನಲ್ಲಿ ಕಾಲೇಜು ಪ್ರಾಧ್ಯಾಪಕರಾಗಿ ತರಗತಿಯಲ್ಲಿ ಬೋಧನೆ ಮಾಡುವ ಮೂಲಕ ಜಾಗತಿಕ ಗಮನ ಸೆಳೆದಿದ್ದಾರೆ. ತಮ್ಮ ಅಪಾರ ಜ್ಞಾನ ಮತ್ತು ಕಠಿಣ ಪರಿಶ್ರಮದಿಂದ ವಿಶ್ವದ ಅತ್ಯಂತ ಕಿರಿಯ ಪುರುಷ ಪ್ರಾಧ್ಯಾಪಕರಾಗಿ ‘ಗಿನ್ನೆಸ್ ವಿಶ್ವ ದಾಖಲೆ‘ (Guinness World Record) ಬರೆದಿದ್ದಾರೆ. ಇವರ ಈ ಅಸಾಧಾರಣ ಸಾಧನೆಯು ವಯಸ್ಸಿಗಿಂತ ಕಲಿಯುವ ಹಂಬಲ ಮತ್ತು ಸಮರ್ಪಣಾ ಭಾವವೇ ಮುಖ್ಯ ಎಂಬುದನ್ನು ಜಗತ್ತಿಗೆ ಸಾರಿದೆ.

306 ವರ್ಷಗಳ ಸುದೀರ್ಘ ವಿಶ್ವ ದಾಖಲೆ ಧೂಳೀಪಟ:
ನಾಥನ್ ಥಾಮಸ್ ಕೇವಲ 18 ನೇ ವಯಸ್ಸಿನಲ್ಲಿ ಮಿಯಾಮಿ ಡೇಡ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಬೋಧಕರಾಗಿ ನೇಮಕಗೊಂಡರು. ಇದರೊಂದಿಗೆ ಅವರು ಬರೋಬ್ಬರಿ 306 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಮುರಿದ್ದಾರೆ. ಇದಕ್ಕೂ ಮೊದಲು, 1717 ರಲ್ಲಿ ಪ್ರಸಿದ್ಧ ಗಣಿತಜ್ಞ ಮತ್ತು ಭೌತಶಾಸ್ತ್ರಜ್ಞ ಕಾಲಿನ್ ಮ್ಯಾಕ್ಲೌರಿನ್ ತಮ್ಮ 19 ನೇ ವಯಸ್ಸಿನಲ್ಲಿ ಪ್ರಾಧ್ಯಾಪಕರಾಗಿ ನಿರ್ಮಿಸಿದ್ದ ಸುದೀರ್ಘ ದಾಖಲೆಯನ್ನು ನಾಥನ್ ತಮ್ಮದಾಗಿಸಿಕೊಂಡಿದ್ದಾರೆ. ತನಗಿಂತ ಸಮಾನ ವಯಸ್ಸಿನ ಅಥವಾ ಹಿರಿಯ ವಿದ್ಯಾರ್ಥಿಗಳಿಗೆ ಇವರು ಪಾಠ ಮಾಡುವುದು ವಿಶೇಷ.

14ನೇ ವಯಸ್ಸಿಗೆ ಸ್ನಾತಕೋತ್ತರ ಪದವಿ:
ನಾಥನ್ ಅವರ ಪೋಷಕರಿಬ್ಬರೂ ಎಂಜಿನಿಯರ್‌ಗಳಾಗಿದ್ದರಿಂದ, ಅವರಿಗೆ ಬಾಲ್ಯದಿಂದಲೇ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ವಿಷಯಗಳಲ್ಲಿ ಅಪಾರ ಆಸಕ್ತಿ ಮೂಡಿತು. ತಮ್ಮ 10 ನೇ ವಯಸ್ಸಿನಲ್ಲೇ ಕಾಲೇಜು ಮಟ್ಟದ ಅಧ್ಯಯನ ಪ್ರಾರಂಭಿಸಿದ ಇವರು, ಕೇವಲ 14 ನೇ ವಯಸ್ಸಿಗೆ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಎರಡನ್ನೂ ಪೂರ್ಣಗೊಳಿಸಿದ್ದರು. ತರುವಾಯ, ಆಗಸ್ಟ್ 2023 ರಲ್ಲಿ ಮಿಯಾಮಿ ಡೇಡ್ ಕಾಲೇಜಿನಲ್ಲಿ ಕಂಪ್ಯೂಟರ್ ಪ್ರೋಗ್ರಾಮಿಂಗ್ ಕಲಿಸಲು ಪ್ರಾರಂಭಿಸಿದರು.

ಬೋಧನೆಯ ಜೊತೆಗೆ ಈಗ ಕಾನೂನು ವ್ಯಾಸಂಗ:
ಪ್ರಸ್ತುತ 21 ವರ್ಷದ ನಾಥನ್, ಬೋಧನೆಯನ್ನು ನಿಲ್ಲಿಸದೇ ಆನ್‌ಲೈನ್ ಮೂಲಕ ಮುಂದುವರಿಸುತ್ತಲೇ ಮಿಯಾಮಿ ವಿಶ್ವವಿದ್ಯಾಲಯದ ಕಾನೂನು ಶಾಲೆಯಿಂದ ಜ್ಯೂರಿಸ್ ಡಾಕ್ಟರ್ (JD) ಪದವಿ ಪಡೆಯುತ್ತಿದ್ದಾರೆ. ಭವಿಷ್ಯದಲ್ಲಿ ಬೌದ್ಧಿಕ ಆಸ್ತಿ ಕಾನೂನು (Intellectual Property Law) ಮತ್ತು STEM ನಾವೀನ್ಯತೆಯಲ್ಲಿ ಪರಿಣತಿ ಹೊಂದುವ ಗುರಿ ಹೊಂದಿದ್ದಾರೆ. ವಿಶ್ವದ ಅತ್ಯಂತ ಕಿರಿಯ ಪುರುಷ ಪ್ರಾಧ್ಯಾಪಕನಾಗಿ ನಾಥನ್ ಥಾಮಸ್ ಮತ್ತು ಅತ್ಯಂತ ಕಿರಿಯ ಮಹಿಳಾ ಪ್ರಾಧ್ಯಾಪಕಿಯಾಗಿ ಅಲಿಯಾ ಸಬೂರ್ ದಾಖಲೆ ಬರೆದಿದ್ದು, ಪ್ರತಿಭೆಗೆ ವಯಸ್ಸಿನ ಹಂಗಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ.


Share with

Leave a Reply

Your email address will not be published. Required fields are marked *