ಕಾಸರಗೋಡು: ಪಾಠಗಳನ್ನು ಓದದೆ ಇರುವುದಕ್ಕಾಗಿ 12 ವರ್ಷದ ಮದ್ರಸಾ ವಿದ್ಯಾರ್ಥಿನಿಯನ್ನು ಥಳಿಸಿ ಬೆದರಿಕೆ ಹಾಕಿದ ಆರೋಪ ಎದುರಿಸಿದ ಶಿಕ್ಷಕ ಬೇಕಲ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಮಧ್ಯಾಹ್ನ ಹಾಜರಾಗಿದ್ದಾರೆ.
ಹುಡುಗಿ ಅಥವಾ ಆಕೆಯ ಕುಟುಂಬದವರು ದೂರು ನೀಡಿದರೆ ಥಳಿಸಿದ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿನಿ ಶನಿವಾರ ಬೆಳಗ್ಗೆ ನಾಪತ್ತೆಯಾಗಿದ್ದಳು. ಮದ್ರಸಾಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದ ಬಾಲಕಿ ಅಲ್ಲಿಗೆ ತಲುಪಲಿಲ್ಲ. ಇದರ ಅನಂತರ, ಕುಟುಂಬವು ಬೇಕಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತು. ಪೊಲೀಸರು ತನಿಖೆ ಮುಂದುವರಿಸುತ್ತಿದ್ದಾಗ ಬಾಲಕಿ ಮಂಗಳೂರಿನಲ್ಲಿ ಪತ್ತೆಯಾಗಿದ್ದಳು.
ಆಟೋ ಚಾಲಕರ ಸಹಾಯದಿಂದ ಪಾಂಡೇಶ್ವರ ಪೊಲೀಸ್ ಠಾಣೆ ತಲುಪಿದ ಬಾಲಕಿ, ಕಪ್ಪು ಬಣ್ಣದ ಕಾರಿನಲ್ಲಿ ತನ್ನನ್ನು ಅಪಹರಿಸಲಾಗಿತ್ತು ಎಂದು ಹೇಳಿದ್ದಳು. ವಿಚಾರಣೆ ಮುಂದುವರಿದಾಗ ಬಾಲಕಿ ತಾನು ಶಿಕ್ಷಕನ ಹೊಡೆತಕ್ಕೆ ಹೆದರಿ ಮಂಗಳೂರು ರೈಲು ಹತ್ತಿರುವುದಾಗಿ ಹೇಳಿಕೆ ನೀಡಿದ್ದಳು.




