
ಬೇಲೂರು : ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಆನೆಗಳನ್ನು ಸೆರೆಹಿಡಿದು ಸ್ಥಳಾಂತರಿಸುವ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಅಂತಿಮ ಹಂತದ ಸಿದ್ಧತೆ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಮುತ್ತಿಗೋಡು ಆನೆ ಶಿಬಿರದಿಂದ ಅಶೋಕ, ರೋಹಿತ್ ಹಾಗೂ ಶ್ರೀಕಂಠ ಹೆಸರಿನ ತರಬೇತಿ ಪಡೆದ ಕುಮ್ಕಿ ಆನೆಗಳನ್ನು ಬಿಕ್ಕೋಡು ಅರಣ್ಯ ಇಲಾಖೆಯ ಶಿಬಿರಕ್ಕೆ ಕರೆತರಲಾಗಿದೆ. ಅಲ್ಲದೆ, ದುಬಾರೆ ಆನೆ ಶಿಬಿರದಿಂದಲೂ ಹೆಚ್ಚುವರಿ ಕುಮ್ಕಿ ಆನೆಗಳನ್ನು ಕರೆತರುವ ನಿರೀಕ್ಷೆಯಿದೆ. ಕಾಡಾನೆಗಳ ಸೆರೆ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕೈಗೊಂಡಿದ್ದು, ಕಾರ್ಯಾಚರಣೆಯಲ್ಲಿ ಅನುಭವಿ ಸಿಬ್ಬಂದಿ ಹಾಗೂ ತರಬೇತಿ ಪಡೆದ ಕುಮ್ಕಿ ಆನೆಗಳನ್ನು ಬಳಸಿಕೊಳ್ಳಲು ಯೋಜಿಸಲಾಗಿದೆ. ರೈತರ ಕೃಷಿ ಬೆಳೆಗಳಿಗೆ ನಿರಂತರವಾಗಿ ಹಾನಿ ಉಂಟುಮಾಡುತ್ತಿರುವ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬುದು ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 17ರ ಮಂಗಳವಾರ ಬೆಳಗ್ಗೆಯಿಂದಲೇ ಕಾಡಾನೆಗಳ ಸೆರೆ ಕಾರ್ಯಾಚರಣೆ ಆರಂಭಿಸಲು ಅರಣ್ಯ ಇಲಾಖೆ ಸಜ್ಜಾಗಿದ್ದು, ಕಾರ್ಯಾಚರಣೆಯ ಯಶಸ್ಸಿನ ನಿರೀಕ್ಷೆಯಲ್ಲಿ ಸ್ಥಳೀಯ ಗ್ರಾಮಸ್ಥರು ಕಾಯುತ್ತಿದ್ದಾರೆ.




