
ಬಂಟ್ವಾಳ: ನವರಾತ್ರಿ ನೆಪದಲ್ಲಿ ತುಳುನಾಡಿನ ಶ್ರೇಷ್ಠ ಜಾನಪದ ಕಲೆಯಾದ ಯಕ್ಷಗಾನದ ವೇಷ ಧರಿಸಿ ಜನರಲ್ಲಿ ಭಿಕ್ಷೆ ಬೇಡುವುದನ್ನು ಆಕ್ಷೇಪಿಸಿದ ಹಿರಿಯ ಯಕ್ಷಗಾನ ಕಲಾವಿದರಾದ ಅಶೋಕ್ ಶೆಟ್ಟಿ ಸರಪಾಡಿಯವರು ವೇಷಧಾರಿಯೊಬ್ಬನ ವೇಷವನ್ನು ಸ್ಥಳದಲ್ಲೇ ಕಳಚಿದ ಘಟನೆ ಬಿ.ಸಿ ರೋಡಿನಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.
ದಸರಾ ಹಬ್ಬದ ನೆಪದಲ್ಲಿ ದಾವಣಗೆರೆಯ ವ್ಯಕ್ತಿಯೊಬ್ಬ ಯಕ್ಷಗಾನದ ವೇಷವನ್ನು ಧರಿಸಿ ಸಾರ್ವಜನಿಕರಲ್ಲಿ ಭಿಕ್ಷೆ ಬೇಡಿ ಹಣವನ್ನು ಸಂಗ್ರಹ ಮಾಡುತ್ತಿದ್ದ ಇದನ್ನು ಗಮನಿಸಿದ ಹಿರಿಯ ಯಕ್ಷಗಾನ ಕಲಾವಿದರಾದ ಅಶೋಕ್ ಶೆಟ್ಟಿ ಸರಪಾಡಿಯವರು ವೇಷಧಾರಿಯನ್ನು ನಿಲ್ಲಿಸಿ ಯಕ್ಷಗಾನದ ವೇಷಕ್ಕೆ ತನ್ನದೇ ಆದ ಗೌರವ ಇದೆ. ಅದು ಅನೇಕ ಮಂದಿ ಕಲಾವಿದರಿಗೆ ಬದುಕು ನೀಡಿದೆ. ಯಕ್ಷ ವೇಷ ಧರಿಸಿ ಭಿಕ್ಷೆ ಬೇಡಿ ಯಕ್ಷಗಾನವನ್ನು ಅವಮಾನಿಸುವುದು ಸಮಂಜಸವಲ್ಲ. ತಕ್ಷಣ ವೇಷ ಕಳಚುವಂತೆ ಒತ್ತಾಯಿಸಿದ್ದಲ್ಲದೆ ವೇಷ ಕಳಚುವರೆಗೂ ಪಟ್ಟು ಹಿಡಿದರು. ಇದರಿಂದಾಗಿ ಯಕ್ಷಗಾನ ವೇಷ ಧರಿಸಿ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯು ವೇಷ ಕಳಚಿ, ಕ್ಷಮೆ ಯಾಚಿಸಿ ನಿರ್ಗಮಿಸ ಬೇಕಾಯಿತು. ಅಶೋಕ್ ಶೆಟ್ಟಿ ಅವರ ಈ ನಡೆಗೆ ಯಕ್ಷ ಪ್ರೇಮಿಗಳು ಹಾಗೂ ಕಲಾವಿದರು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.





