ಪುತ್ತೂರು: ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ್ ಶಾಂತಿವನ (53 ವ)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಫೆ.25ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಒಳಮೊಗ್ರು ಗ್ರಾಮದ ಶಾಂತಿವನ ನಾರಾಯಣ ಎಂ.ಎಸ್ ಮತ್ತು ಪ್ರೇಮ ಅವರ ಪುತ್ರರಾಗಿರುವ ಚಂದ್ರಕಾಂತ್ ಶಾಂತಿವನ ರವರು ಧಾರ್ಮಿಕ ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘ ಆರಂಭದ ಹಂತದಲ್ಲಿಯೇ ಕರ್ತವ್ಯಕ್ಕೆ ಸೇರಿದ ಇವರು ಕಳೆದ 33 ವರ್ಷಗಳಿಂದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕುಂಬ್ರ ವರ್ತಕರ ಸಂಘದ ಗೌರವ ಸಲಹೆಗಾರರಾಗಿ, ಕುಂಬ್ರ ಸ್ಪಂದನಾ ಸೇವಾ ಬಳಗದ ಪದಾಧಿಕಾರಿ ಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಕುಂಬ್ರ ವಿಶ್ವ ಯುವಕ ಮಂಡಲದ ಅಧ್ಯಕ್ಷರಾಗಿ, ಕುಂಬ್ರ ಶ್ರೀರಾಮ ಭಜನಾ ಮಂದಿರದ ಉಪಾಧ್ಯಕ್ಷರಾಗಿ, ಕೋಶಾಧಿಕಾರಿಯಾಗಿ, ಬಿಲ್ಲವ ಸಂಘದ ತಾಲೂಕು ಕೋಶಾಧಿಕಾರಿಯಾಗಿ, ಯುವ ವಾಹಿನಿ ಘಟಕದ ತಾಲೂಕು ಅಧ್ಯಕ್ಷರಾಗಿ, ಶ್ರೀ ಕ್ಷೇತ್ರ ಗೆಜ್ಜೆಗಿರಿ ಬ್ರಹ್ಮ ಕಲಶೋತ್ಸವದ ಆರ್ಥಿಕ ಸಮಿತಿಯ ಸಂಚಾಲಕರಾಗಿ, ಪಾಪೆಮಜಲು ಶ್ರೀ ಬ್ರಹ್ಮ ಬೈದೇರ್ಕಳ ಗರಡಿಯ ಆಡಳಿತ ಸಮಿತಿಯ ಅಧ್ಯಕ್ಷರಾಗಿ, ಕುಂಬ್ರ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ಕುಂಬ್ರ ಜೆಸಿ ಪದಾಧಿಕಾರಿಯಾಗಿ ಹೀಗೆ ಹತ್ತು ಹಲವು ಸಂಘ-ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು.
ಮೃತರು ತಂದೆ, ತಾಯಿ ಹಾಗೆ ಕುಂಬ್ರ ಕೆಪಿಎಸ್ ಶಾಲೆಯಲ್ಲಿ ಕ್ಲರ್ಕ್ ಆಗಿರುವ ಪತ್ನಿ ಅನಿತಾ ಹಾಗೂ ಪುತ್ರರಾದ ಅಂಚಿತ್ ಮತ್ತು ನಿಶ್ಚಲ್ ಅವರನ್ನು ಅಗಲಿದ್ದಾರೆ.