ವಿಶೇಷ ಚೇತನ ವಿದ್ಯಾರ್ಥಿಗಳನ್ನು ಯಾವುದೇ ಕಾರಣಕ್ಕೂ ಮುಖ್ಯ ವಾಹಿನಿಯಿಂದ ಹಿಂದೆ ಉಳಿಸದೆ, ಎಲ್ಲಾ ಸೌಕರ್ಯಗಳನ್ನು ಒದಗಿಸಿ ಹಾಗೂ ಆ ವಿದ್ಯಾರ್ಥಿಗಳ ವೈದ್ಯಕೀಯ ಸೌಲಭ್ಯಗಳ ಅಗತ್ಯತೆಯನ್ನು ಗಮನಕ್ಕೆ ತಂದರೆ ಉಚಿತವಾಗಿ ಮಾಡಿಸಲಾಗುವುದಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಗೌರವಾನ್ವಿತ ಶಾಸಕರಾದ ಶ್ರೀ ರಾಜೇಶ್ ನಾಯ್ಕ ಉಳಿಪ್ಪಾಡಿಯವರು ಕ್ಷೇತ್ರ ಸಂಪನ್ಮೂಲ ಕೇಂದ್ರ, ಬಂಟ್ವಾಳ ಇಲ್ಲಿ ಜರುಗಿದ ಗಾಂಧೀ ಜಯಂತಿ ದಿನಾಚರಣೆಯ ಸಂದರ್ಭದಲ್ಲಿ ಸಾಧನ ಸಲಕರಣೆಗಳ ವಿತರಣಾ ಕಾರ್ಯಕ್ರಮದಲ್ಲಿ ವಿವಿಧ ನ್ಯೂನ್ಯತೆಯ ವಿದ್ಯಾರ್ಥಿಗಳ ಪೋಷಕರನ್ನು ಕುರಿತು ಮಾತನಾಡಿದರು.
ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ಶ್ರೀ ಮಂಜುನಾಥನ್ ಎಂ ಜಿ ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರನ್ನೂ ಸ್ವಾಗತಿಸಿ, ಶಾಲಾ ಶಿಕ್ಷಣದಿಂದ ಮಕ್ಕಳು ಹೊರಗುಳಿಯದೆ ಎಲ್ಲರೂ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಬೇಕೆಂದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಕ್ಷೇತ್ರ ಸಮನ್ವಯಾ ಧಿಕಾರಿಯವರಾದ ಶ್ರೀ ರಾಘವೇಂದ್ರ ಬಲ್ಲಾಳ್ ಕೆ ಎಸ್ ರವರು ವಿಶೇಷ ಚೇತನ ವಿದ್ಯಾರ್ಥಿಗಳನ್ನು ಮುಖ್ಯವಾಹಿನಿಗೆ ತರಲು ಇಂತಹ ಪ್ರೋತ್ಸಾಹದಾಯಕ ಕಾರ್ಯಕ್ರಮಗಳ ಅಗತ್ಯತೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಶು ವೈದ್ಯಾಧಿಕಾರಿಯವರಾದ ಶ್ರೀ ಡಾ| ಅವಿನಾಶ್ ಮತ್ತು ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲ|| ಪ್ರಶಾಂತ್ ಕೋಟ್ಯಾನ್ ಹಾಗೂ ಸದಸ್ಯರಾದ ಲ|| ಸತ್ಯನಾರಾಯಣ ರಾವ್ ರವರು ಉಪಸ್ಥಿತರಿದ್ದರು. ಫಲಾನುಭವಿಗಳಾದ 25 ಪೋಷಕರು, 25 ವಿದ್ಯಾರ್ಥಿಗಳು, ತಾಲೂಕಿನ ಶಿಕ್ಷಣ ಕ್ಷೇತ್ರದ ಅನುಷ್ಠಾನಾಧಿಕಾರಿಗಳು, ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಸುರೇಖಾ ಯಳವಾರ ರವರು ನಿರ್ವಹಿಸಿದರು. ಶ್ರೀ ಪ್ರಶಾಂತ್ ರವರು ಕಾರ್ಯಕ್ರಮದಲ್ಲಿ ಸಹಕರಿಸಿದರು ಹಾಗೂ ಶ್ರೀ ರವೀಂದ್ರರವರು ಧನ್ಯವಾದವಿತ್ತು ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.