ಬಂಟ್ವಾಳ : ಸ್ಪರ್ಧೆಗಳು ಆರೋಗ್ಯಪೂರ್ಣ ಬೆಳವಣಿಗೆಗೆ ಸಹಕರಿಸುತ್ತವೆ. ಶಾಲಾ ಮಟ್ಟದಲ್ಲಿ ನಡೆಯುವ ಪ್ರತಿಭಾ ಕಾರಂಜಿ ಸ್ಪರ್ಧೆಗಳು ಮಗುವಿನಲ್ಲಿ ಹುದುಗಿರುವ ಪಠ್ಯೇತರ ಚಟುವಟಿಕೆಗಳನ್ನು ಹೊರಹಾಕಿ ಪ್ರತಿಭೆಯನ್ನು ಕಾರಂಜಿಯಂತೆ ಅರಳಿಸಿ ಪ್ರತಿಭೆಯ ಅನಾವರಣಗೊಳಿಸುವ ವೇದಿಕೆಯಾಗಿದೆ. ಇದರ ಜೊತೆಗೆ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವು ಬೆಳೆಯುತ್ತದೆ ಎಂಬುದಾಗಿ ರೋಟರಿ ಕ್ಲಬ್ ಬಿ.ಸಿ.ರೋಡ್ ಸಿಟಿ ಇದರ ಅಧ್ಯಕ್ಷರಾದ ಸೇಸಪ್ಪ ಮಾಸ್ಟರ್ ತಿಳಿಸಿದರು.
ಅವರು ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ, ಸಮೂಹ ಸಂಪನ್ಮೂಲ ಕೇಂದ್ರ ಕಲ್ಲಡ್ಕ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಲ ಇದರ ವತಿಯಿಂದ ರೋಟರಿ ಕ್ಲಬ್ ಬಿ.ಸಿ.ರೋಡ್ ಸಿಟಿ, ಹಾಗೂ ಹಿರಿಯ ವಿದ್ಯಾರ್ಥಿ ಸಂಘ ನೆಟ್ಲ ಶಾಲೆ ಇವುಗಳ ಸಹಕಾರದೊಂದಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಲದಲ್ಲಿ ಜರಗಿದ ಕಲ್ಲಡ್ಕ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ -2024 ನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಭಾಸ್ಕರ್ ಕುಲಾಲ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮದ ಶಿಕ್ಷಣವನ್ನು ನೀಡುವುದು ನಮ್ಮ ಪೋಷಕರ ಒಂದು ಬೇಡಿಕೆಯಾಗಿದ್ದು ಮುಂದಿನ ದಿನಗಳಲ್ಲಿ ಅದನ್ನು ಕಾರ್ಯರೂಪಕ್ಕೆ ತರುವ ಯೋಜನೆ ಇದೆ; ಜೊತೆಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸುವುದು, ಶೈಕ್ಷಣಿಕ ವಿಚಾರಗಳಲ್ಲಿ ಮತ್ತು ಸಾಂಸ್ಕೃತಿಕ ವಿಷಯವನ್ನು ಪ್ರತಿ ಮಗುವಿಗೂ ತಲುಪುವಂತೆ ಮಾಡುವುದು ನಮ್ಮ ಶಾಲೆಯ ಒಂದು ಮುಖ್ಯ ವಿಚಾರವಾಗಿದೆ. ಪ್ರತಿ ಮಗು ತನ್ನಲ್ಲಿರುವ ಯಾವುದೇ ರೀತಿಯ ಕಲೆಯನ್ನು, ಪ್ರತಿಭೆಯನ್ನು ಹೊರಹಾಕುವಲ್ಲಿ ಎಲ್ಲಾ ಶಿಕ್ಷಕರು ಪ್ರೋತ್ಸಾಹ ನೀಡುತ್ತಿದ್ದಾರೆ ಎಂಬುದಾಗಿ ಹಿರಿಯ ವಿದ್ಯಾರ್ಥಿ ಜಯರಾಮ ನಾವಡ ಹೇಳಿದರು.
ಕಾರ್ಯಕ್ರಮದ ನೆನಪಿಗಾಗಿ ರೋಟರಿ ಕ್ಲಬ್ ಬಿ.ಸಿ.ರೋಡ್ ಸಿಟಿ ವತಿಯಿಂದ ಶಾಲಾ ಆವರಣದಲ್ಲಿ ಹಣ್ಣಿನ ಗಿಡ ನೆಡಲಾಯಿತು.
ಕಿರಿಯ ಹಾಗೂ ಹಿರಿಯ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಕಲ್ಲಡ್ಕ ಕ್ಲಸ್ಟರಿನ ಶಾಲೆಗಳ ಸುಮಾರು 250 ಮಕ್ಕಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ರಾಜ್ಯಮಟ್ಟದ ಶಿಕ್ಷಕರತ್ನ ಪ್ರಶಸ್ತಿ ಪುರಸ್ಕೃತ ಮಜಿ ಶಾಲಾ ಶಿಕ್ಷಕಿ ಸಂಗೀತ ಶರ್ಮ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ತಿಮ್ಮಪ್ಪ ನಾಯ್ಕ, ಕೆಲಿಂಜ ಶಾಲೆ ಇವರನ್ನು ಅಭಿನಂದಿಸಿ ಗೌರವಿಸಲಾಯಿತು.
ವಿಶೇಷ ಆಕರ್ಷಣೆಯಾಗಿ ಕಾರ್ಯಕ್ರಮಕ್ಕೆ ಆಗಮಿಸುವ ಮಕ್ಕಳನ್ನು ಪ್ರೋತ್ಸಾಹಿಸಲು ‘ನೆಟ್ಲ ಶಾಲಾ ವಾಹನ’ ಎನ್ನುವ ಸೆಲ್ಫಿ ಕಾರ್ನರನ್ನು ಮಾಡಿದ್ದರು.
ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ವಿಶೇಷವಾಗಿ ಪ್ರಥಮ ಸ್ಥಾನ ಪಡೆದವರಿಗೆ ಬಂಗಾರ ಬಣ್ಣದ ಕಿರೀಟ, ಬಂಗಾರದ ಪದಕ, ಪ್ರಶಸ್ತಿ ಪತ್ರ, ದ್ವಿತೀಯ ಬಹುಮಾನ ಪಡೆದವರಿಗೆ ಬೆಳ್ಳಿ ಬಣ್ಣದ ಕಿರೀಟ, ಬೆಳ್ಳಿ ಪದಕ, ಪ್ರಶಸ್ತಿ ಪತ್ರ, ತೃತೀಯ ಸ್ಥಾನ ಪಡೆದವರಿಗೆ ಕಂಚಿನ ಬಣ್ಣದ ಕಿರೀಟ, ಕಂಚಿನ ಪದಕ, ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಶಂಸಾ ಪತ್ರ ನೀಡಲಾಯಿತು.
ಹಿರಿಯ ಹಾಗೂ ಕಿರಿಯ ಎರಡು ವಿಭಾಗದಲ್ಲೂ ಸಮಗ್ರ ಪ್ರಶಸ್ತಿಯನ್ನು ನೆಟ್ಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಡೆದುಕೊಂಡಿತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬಿ.ಸಿ.ರೋಡ್ ಸಿಟಿಯ ಎಸ್.ಆರ್.ಜಿ. ತಾಲೂಕು ಪಂಚಾಯತಿನ ಮಾಜಿ ಅಧ್ಯಕ್ಷರಾದ ರೋ. ಪದ್ಮನಾಭ ರೈ, ಗೋಳ್ತಮಜಲ್ ಗ್ರಾಮ ಪಂಚಾಯತ್ ಸದಸ್ಯರಾದ ಸವಿತಾ, ಹರಿಣಾಕ್ಷಿ, ದೀಪಕ್, ರೋಟರಿ ಕ್ಲಬ್ ಬಿ.ಸಿ.ರೋಡ್ ಸಿಟಿಯ ಸ್ಥಾಪಕ ಅಧ್ಯಕ್ಷರಾದ ರೋ. ಸತೀಶ್, ನಿಕಟಪೂರ್ವ ಅಧ್ಯಕ್ಷ ರೋ. ಗಣೇಶ್ ಶೆಟ್ಟಿ, ಸದಸ್ಯರುಗಳಾದ ರೋ. ರಮೇಶ್ ಪೂಜಾರಿ ನೆಟ್ಲ, ರೋ. ಸುಧೀರ್ ಕುಮಾರ್, ರೋ. ಸುಂದರ ಬಂಗೇರ, ರೋ. ದಿವಾಕರ ಶೆಟ್ಟಿ, ನೆಟ್ಲ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಚಂಚಲಾಕ್ಷಿ, ಸದಸ್ಯರುಗಳಾದ ರಮೇಶ್ ದೇವಾಡಿಗ, ಸುರೇಶ್ ಪಿಲಿಂಜ, ಸೇಸಪ್ಪ ಮೂಲ್ಯ, ಸುಧಾಕರ ದೇವಾಡಿಗ, ನಳಿನಾಕ್ಷಿ, ಮಮತಾ, ವೀಣಾ, ರೂಪ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅನಿಲ್ ಕುಮಾರ್, ಶಿಕ್ಷಣ ಸಂಯೋಜಕಿ ಪ್ರತಿಮಾ ವೈ. ವಿ, ಸಮೂಹ ಸಂಪನ್ಮೂಲ ವ್ಯಕ್ತಿ ಜ್ಯೋತಿ, ಶಾಲಾ ನಿವೃತ ಮುಖ್ಯ ಶಿಕ್ಷಕಿ ಸೆಲಿನ್ ಪಿಂಟೋ, ಪುರೋಹಿತರಾದ ಜಗದೀಶ್ ಸೋಮಯಾಜಿ, ರಾಜೇಶ್ ದೇವಾಡಿಗ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಸುಕನ್ಯ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನೆಟ್ಲ ಶಾಲಾ ಮಕ್ಕಳು ಪ್ರಾರ್ಥಿಸಿ, ಸಹಶಿಕ್ಷಕ ಪ್ರವೀಣ್ ಸ್ವಾಗತಿಸಿ, ಕಲ್ಲಡ್ಕ ಸಿ.ಆರ್.ಪಿ. ಅಬೂಬಕ್ಕರ್ ಅಶ್ರಫ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಭಾರ ಮುಖ್ಯ ಶಿಕ್ಷಕಿ ಶೋಭಲತಾ ವಂದಿಸಿ, ಕಂಪ್ಯೂಟರ್ ಶಿಕ್ಷಕಿ ಇಂದಿರಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಮೊಹಮ್ಮದ್ ಅಖೀಲ್, ಶಿಕ್ಷಕಿಯರಾದ ನಿಶ್ಮಿತಾ, ಅಶ್ವಿನಿ, ಶಾಲಾ ಪೋಷಕರು, ಹಿರಿಯ ವಿದ್ಯಾರ್ಥಿಗಳು ಸಹಕರಿಸಿದರು.