ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್..! ಎಂಗೇಜ್ಮೆಂಟ್ ಮೊದಲೇ ಪ್ರಿಯಕರನ ಜೊತೆ ವಿವಾಹವಾಗಿದ್ದ ಸಿಯಾ..!!

Share with

ಪುಣೆ: ಮಹಾರಾಷ್ಟ್ರದ ಪ್ರಸಿದ್ಧ ಲೋಹಗಡ ಕೋಟೆ ಕೊಲೆ ಪ್ರಕರಣಕ್ಕೆ ಈಗ ಮಹತ್ತರ ತಿರುವು ಸಿಕ್ಕಿದೆ. ಉದ್ಯಮಿ ಕೇತನ್ ಅಗರ್ವಾಲ್ ಅವರ ನಿಗೂಢ ಸಾವಿನ ತನಿಖೆ ನಡೆಸುತ್ತಿರುವ ಪುಣೆ ಗ್ರಾಮಾಂತರ ಪೊಲೀಸರಿಗೆ ಆಘಾತಕಾರಿ ಮಾಹಿತಿ ಲಭ್ಯವಾಗಿದ್ದು, ಪ್ರಮುಖ ಆರೋಪಿ ಸಿಯಾ ಗೋಯಲ್ (20) ತನ್ನ ನಿಶ್ಚಿತಾರ್ಥದ ಬೆನ್ನಲ್ಲೇ ಪ್ರೇಮಿ ಚೇತನ್ ಚೌಧರಿ ಜೊತೆ ರಹಸ್ಯವಾಗಿ ವಿವಾಹವಾಗಿದ್ದಳು ಎಂಬ ವಿಷಯ ಬೆಳಕಿಗೆ ಬಂದಿದೆ.

ನೋಂದಾಯಿತ ವಿವಾಹದ ತನಿಖೆ

ಕಳೆದ ಫೆಬ್ರವರಿಯಲ್ಲಿ ಪುಣೆಯ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ (25) ಅವರೊಂದಿಗೆ ಸಿಯಾ ನಿಶ್ಚಿತಾರ್ಥ ನಡೆದಿತ್ತು. ಆದರೆ, ಇದಾದ ಬಳಿಕ ಸುಮಾರು ನಾಲ್ಕು ತಿಂಗಳ ಹಿಂದೆ ಸಿಯಾ ತನ್ನ ಪ್ರೇಮಿ ಚೇತನ್ ಚೌಧರಿಯನ್ನು ಮದುವೆ ನೋಂದಣಾಧಿಕಾರಿ ಕಚೇರಿಯಲ್ಲಿ ರಹಸ್ಯವಾಗಿ ವಿವಾಹವಾಗಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವಿಶೇಷ ವಿವಾಹ ಕಾಯ್ದೆಯಡಿ ಇವರಿಬ್ಬರ ಮದುವೆ ನೋಂದಣಿಯಾಗಿದೆಯೇ ಮತ್ತು ಅದರ ಪ್ರಮಾಣಪತ್ರ ಅಸ್ತಿತ್ವದಲ್ಲಿದೆಯೇ ಎಂಬುದನ್ನು ಪೊಲೀಸರು ಸದ್ಯ ಪರಿಶೀಲಿಸುತ್ತಿದ್ದಾರೆ. ಈ ಮದುವೆ ನಿಜವಾಗಿದ್ದಲ್ಲಿ, ಸಿಯಾ ಮೊದಲೇ ವಿವಾಹಿತಳಾಗಿದ್ದರೂ ಆ ವಿಷಯವನ್ನು ಮುಚ್ಚಿಟ್ಟು ಕೇತನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ವಂಚಿಸಿರುವುದು ಸಾಬೀತಾಗಲಿದೆ.

ಸ್ನೇಹಿತರ ವಿಚಾರಣೆ

ಈ ರಹಸ್ಯ ವಿವಾಹದ ವೇಳೆ ಸಾಕ್ಷಿಗಳಾಗಿ ಸಹಿ ಮಾಡಿದ್ದ ಸಿಯಾಳ ಕಾಲೇಜಿನ ಇಬ್ಬರು ಸ್ನೇಹಿತರನ್ನು ಸಹ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೆ, ಸಿಯಾಳ ಖಾಸಗಿ ಇನ್‌ಸ್ಟಾಗ್ರಾಮ್ ಖಾತೆಯಿಂದ ಡಿಲೀಟ್ ಮಾಡಲಾಗಿದ್ದ ಕೆಲವು ಫೋಟೋಗಳನ್ನು ಮರುಪಡೆಯಲು ತಾಂತ್ರಿಕ ತಂಡ ಪ್ರಯತ್ನಿಸುತ್ತಿದೆ. ಈ ಫೋಟೋಗಳಲ್ಲಿ ಸಿಯಾ ಮತ್ತು ಚೇತನ್ ಮದುವೆಯ ಹಾರ ಧರಿಸಿದ್ದರು ಎಂದು ಶಂಕಿಸಲಾಗಿದೆ.

ಕೊಲೆಗೆ ಕಾರಣವಾದ ಆತುರ?

ನವೆಂಬ‌ರ್ ತಿಂಗಳಲ್ಲಿ ಉದಯಪುರದಲ್ಲಿ ಅದ್ಧೂರಿ ‘ಡೆಸ್ಟಿನೇಷನ್ ವೆಡ್ಡಿಂಗ್’ ಮಾಡಲು ಕೇತನ್ ಕುಟುಂಬದವರು ಸಿದ್ಧತೆ ನಡೆಸುತ್ತಿದ್ದರು. ಇದಕ್ಕಾಗಿ ಸಿಯಾಳ ಅಧಿಕೃತ ದಾಖಲೆಗಳನ್ನು (ಡಾಕ್ಯುಮೆಂಟ್ಸ್) ನೀಡುವಂತೆ ಕೇತನ್ ಪೋಷಕರು ಕೇಳಿದ್ದರು. ಈ ವೇಳೆ ತನ್ನ ಮೊದಲ ಮದುವೆಯ ಸತ್ಯ ಹೊರಬರಬಹುದೆಂಬ ಭಯದಿಂದ ಸಿಯಾ ಮತ್ತು ಚೇತನ್ ಸೇರಿ ಕೊಲೆಯ ಸಂಚನ್ನು ಆತುರಾತುರವಾಗಿ ರೂಪಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅಷ್ಟೇ ಅಲ್ಲದೆ, ಮದುವೆಗೆ ಮುನ್ನ ನೀಡಬೇಕಾದ ಕಡ್ಡಾಯ ಸಾರ್ವಜನಿಕ ನೋಟಿಸ್ ಪ್ರಕ್ರಿಯೆಯನ್ನು ತಪ್ಪಿಸಲು ಚೇತನ್ ಮಧ್ಯವರ್ತಿಯೊಬ್ಬರಿಗೆ ಲಂಚ ನೀಡಿದ್ದನೇ ಎಂಬುದನ್ನು ಪತ್ತೆಹಚ್ಚಲು ಆತನ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಾಗುತ್ತಿದೆ.

ಪ್ರಕರಣದ ಹಿನ್ನೆಲೆ

ಜೂನ್ 18 ರಂದು ಲೋಹಗಡ ಕೋಟೆಗೆ ಟ್ರೆಕ್ಕಿಂಗ್ ಹೋಗಿದ್ದಾಗ ಕೇತನ್ ಅಗರ್ವಾಲ್ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದರು. ಆರಂಭದಲ್ಲಿ ಇದೊಂದು ಅಪಘಾತ ಎಂದು ಭಾವಿಸಲಾಗಿತ್ತು. ಆದರೆ, ಸಿಯಾಗೆ ಈ ಮದುವೆ ಇಷ್ಟವಿಲ್ಲದ ಕಾರಣ ತನ್ನ ಪ್ರೇಮಿಯೊಂದಿಗೆ ಸೇರಿ ಕೇತನ್‌ನನ್ನು ಬೆಟ್ಟದಿಂದ ತಳ್ಳಿ ಕೊಲೆ ಮಾಡಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿತ್ತು. ಸದ್ಯ ಆರೋಪಿಗಳಾದ ಸಿಯಾ ಮತ್ತು ಚೇತನ್ ಇಬ್ಬರೂ ನ್ಯಾಯಾಂಗ ಬಂಧನದಲ್ಲಿದ್ದಾರೆ.


Share with

Leave a Reply

Your email address will not be published. Required fields are marked *