
ಮಂಗಳೂರು: ವಿದೇಶದಲ್ಲಿ ತಲೆಮರೆಸಿಕೊಂಡಿರುವ ಭೂಗತ ಪಾತಕಿ ಕಲಿ ಯೋಗೀಶನ ಸಹಚರನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧನ ಮಾಡಿದ್ದು, ಆತನ ಬಳಿಯಿದ್ದ ನಿಷೇಧಿತ ಎಂಡಿಎಂಎ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.
ಕಾಸರಗೋಡು ಜಿಲ್ಲೆಯ ಮೊಗ್ರಾಲ್ ನಿವಾಸಿ ಅಬ್ದುಲ್ ಅಸೀರ್ @ ಸದ್ದು @ ಸಾದು @ ಮಾಯ (32) ಬಂಧಿತ ವ್ಯಕ್ತಿ.
ಅಬ್ದುಲ್ ಅಸೀರ್ ಕಳೆದ ಒಂಬತ್ತು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಕಾಸರಗೋಡಿನಿಂದ ಮಂಗಳೂರಿಗೆ ಮಾದಕ ವಸ್ತುವಿನೊಂದಿಗೆ ಬಂದ ಅಬ್ದುಲ್ ಅಸೀರ್ ನಂತೂರು ಪರಿಸರದಲ್ಲಿ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಮಾಹಿತಿಯ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ಮಾಡಿದಾಗ, ಆರೋಪಿಯಿಂದ ಸುಮಾರು ಐದು ಲಕ್ಷ ಮೌಲ್ಯದ 53 ಗ್ರಾಂ ಎಂಡಿಎಂಎ ವಶಪಡಿಸಿದ್ದಾರೆ.
ಭೂಗತ ಪಾತಕಿ ಕಲಿ ಯೋಗೀಶನ ಸಹಚರನಾಗಿರುವ ಆರೋಪಿ ಅಸೀರ್, ಪುತ್ತೂರಿನ ರಾಜಧಾನಿ ಜ್ಯುವೆಲ್ಲರ್ಸ್‌ಗೆ ಶೂಟೌಟ್ ಮಾಡಿದ ಪ್ರಕರಣದಲ್ಲಿ ಭಾಗಿಯಾಗಿದ್ದ ನಂತರ ಜಾಮೀನಿನ ಮೂಲಕ ಬಿಡುಗಡೆ ಹೊಂದಿದ್ದವನು ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೇ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ.