ಟಿ20 ವಿಶ್ವಕಪ್ 2026ರ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಫೆಬ್ರವರಿ 7 ರಿಂದ ಆರಂಭವಾಗಲಿರುವ ಈ ಬಾರಿಯ ಚುಟುಕು ವಿಶ್ವಕಪ್ಗೆ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆತಿಥ್ಯವಹಿಸಲಿದೆ. ಅದರಂತೆ ಮೊದಲ ಪಂದ್ಯವು ಶ್ರೀಲಂಕಾದಲ್ಲಿ ನಡೆಯುವ ಸಾಧ್ಯತೆಯಿದ್ದು, ಫೈನಲ್ ಪಂದ್ಯಕ್ಕೆ ಭಾರತ ಆತಿಥ್ಯವಹಿಸಲಿದೆ. ಅಷ್ಟೇ ಅಲ್ಲದೆ ಈ ಬಾರಿಯ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ್ ಮೊದಲ ಸುತ್ತಿನಲ್ಲೇ ಮುಖಾಮುಖಿಯಾಗಲಿರುವುದು ಕೂಡ ಖಚಿತವಾಗಿದೆ.
ಟಿ20 ವಿಶ್ವಕಪ್ನ ಕರುಡು ವೇಳಾಪಟ್ಟಿ ಸಿದ್ಧವಾಗಿದ್ದು, ಈ ವೇಳಾಪಟ್ಟಿ ಪ್ರಕಾರ ಭಾರತ ಮತ್ತು ಪಾಕಿಸ್ತಾನ್ ಫೆಬ್ರವರಿ 15 ರಂದು ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೆ ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂ ಆತಿಥ್ಯವಹಿಸಲಿದೆ.
ಪಾಕಿಸ್ತಾನ್ ತಂಡವು ಭಾರತದಲ್ಲಿ ಟೂರ್ನಿ ಆಡಲು ನಿರಾಕರಿಸಿರುವುದರಿಂದ ಸಾಂಪ್ರದಾಯಿಕ ಎದುರಾಳಿಗಳ ಕದನವನ್ನು ಶ್ರೀಲಂಕಾದಲ್ಲಿ ಆಯೋಜಿಸಲಾಗುತ್ತದೆ. ಅಷ್ಟೇ ಅಲ್ಲದೆ ಪಾಕಿಸ್ತಾನ್ ತಂಡವು ಸೆಮಿಫೈನಲ್ಗೇರಿದರೆ ಆ ಪಂದ್ಯವನ್ನು ಸಹ ಶ್ರೀಲಂಕಾದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.
ಹಾಗೆಯೇ ಪಾಕಿಸ್ತಾನ್ ತಂಡವು ಫೈನಲ್ಗೆ ಪ್ರವೇಶಿಸಿದರೆ ಟಿ20 ವಿಶ್ವಕಪ್ನ ಅಂತಿಮ ಹಣಾಹಣಿ ಕೂಡ ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲೇ ಜರುಗಲಿದೆ. ಇನ್ನು ನಾಕೌಟ್ ಹಂತಕ್ಕೇರುವ ಮುನ್ನ ಪಾಕ್ ತಂಡ ಟೂರ್ನಿಯಿಂದ ಹೊರಬಿದ್ದರೆ ಸೆಮಿಫೈನಲ್ಸ್ ಪಂದ್ಯಗಳಿಗೆ ಕೊಲ್ಕತ್ತಾ ಮತ್ತು ಮುಂಬೈ ಆತಿಥ್ಯವಹಿಸಲಿದೆ. ಅದೇ ರೀತಿ ಫೈನಲ್ ಪಂದ್ಯವನ್ನು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.
20 ತಂಡಗಳ ಟೂರ್ನಿ:
ಮುಂಬರುವ ಟಿ20 ವಿಶ್ವಕಪ್ 20 ತಂಡಗಳ ಟೂರ್ನಿ. ಹೀಗಾಗಿ ಈ ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಅದರಂತೆ ಪ್ರತಿ ಗ್ರೂಪ್ನಲ್ಲಿ 5 ತಂಡಗಳಿರಲಿವೆ ಎಂದು ತಿಳಿದು ಬಂದಿದೆ. ಅದರಂತೆ ಮೊದಲ ಸುತ್ತಿನಲ್ಲಿ ಪ್ರತಿ ತಂಡಗಳು ನಾಲ್ಕು ಪಂದ್ಯಗಳನ್ನಾಡಲಿದೆ. ಇದಾದ ಬಳಿಕ ಸೂಪರ್-8 ಮ್ಯಾಚ್ಗಳು ಜರುಗುವ ಸಾಧ್ಯತೆಯಿದೆ.
ಅಂದರೆ ಪ್ರತಿ ಗ್ರೂಪ್ಗಳ ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಮುಂದಿನ ಹಂತಕ್ಕೇರಬಹುದು. ಅದರಂತೆ ದ್ವಿತೀಯ ಸುತ್ತಿನಲ್ಲಿ 8 ತಂಡಗಳು ಕಾಣಿಸಿಕೊಳ್ಳಲಿದೆ. ಈ ಎಂಟು ತಂಡಗಳಿಂದ ನಾಲ್ಕು ತಂಡಗಳು ಸೆಮಿಫೈನಲ್ಗೇರಲಿದೆ. ಸೆಮಿಫೈನಲ್ನಲ್ಲಿ ಗೆಲ್ಲುವ 2 ತಂಡಗಳು ಫೈನಲ್ನಲ್ಲಿ ಮುಖಾಮುಖಿಯಾಗಲಿದೆ.

ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯುವ ತಂಡಗಳು:
- ಭಾರತ
- ಶ್ರೀಲಂಕಾ
- ಪಾಕಿಸ್ತಾನ್
- ಬಾಂಗ್ಲಾದೇಶ್
- ಆಸ್ಟ್ರೇಲಿಯಾ
- ಇಂಗ್ಲೆಂಡ್
- ವೆಸ್ಟ್ ಇಂಡೀಸ್
- ಐರ್ಲೆಂಡ್
- ನ್ಯೂಝಿಲೆಂಡ್
- ಅಫ್ಘಾನಿಸ್ತಾನ್
- ಸೌತ್ ಆಫ್ರಿಕಾ
- ಯುಎಸ್ಎ
- ಕೆನಡಾ
- ನೆದರ್ಲೆಂಡ್ಸ್
- ಇಟಲಿ
- ನಮೀಬಿಯಾ
- ಝಿಂಬಾಬ್ವೆ
- ನೇಪಾಳ
- ಒಮಾನ್
- ಯುಎಇ.




