ಕೇರಳ: ಲೋನ್ ಆಪ್ ಎಂಬ ಮೋಸದ ಜಾಲದ ಬಗ್ಗೆ ಎಷ್ಟು ಎಚ್ಚರ ವಹಿಸಿ ಎಂದು ಹೇಳಿದರೂ ಅದರ ಹಿಂದೆ ಬೀಳುವವರ ಸಂಖ್ಯೆ ಕಮ್ಮಿಯಾಗುತ್ತಿಲ್ಲ. ಈಗಾಗಲೇ ಅದೆಷ್ಟೋ ಜನ ಈ ಮೋಸದ ಜಾಲಕ್ಕೆ ಬಲಿಯಾಗಿದ್ದಾರೆ. ಅದೆಷ್ಟೋ ಜನ ಮನೆ, ಮಠ, ಜಮೀನು ಎಲ್ಲವನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಹೀಗಿರುವಾಗಲೇ ಇತ್ತೀಚೆಗೆ ಕೇರಳದಲ್ಲಿ ನಡೆದ ಕುಟುಂಬವೊಂದರ ಆತ್ಮಹತ್ಯೆ ಪ್ರಕರಣದಲ್ಲಿ ಲೋನ್ ಆಪ್ ಕರಿಛಾಯೆ ಇರೋದು ಬಯಲಾಗಿದೆ.
ಹೌದು..ಕೇರಳದ ಎರ್ನಾಕುಲಂನ ಕದಮಕ್ಕುಡಿಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದರು. ಕದಮಕ್ಕುಡಿ ನಿವಾಸಿ ನಿಜೋ (39), ಆತನ ಪತ್ನಿ ಶಿಲ್ಪ (29) ಮತ್ತು ಮಕ್ಕಳಾದ ಆಬಲ್ (7) ಮತ್ತು ಆಯರೂನ್ (5) ಸಾವಿಗೆ ಶರಣಾಗಿದ್ದರು. ಆರ್ಥಿಕ ಸಮಸ್ಯೆಯೇ ಸಾವಿಗೆ ಕಾರಣ ಎಂದು ಹೇಳಲಾಗಿತ್ತು. ಇದೀಗ ಇಡೀ ಕುಟುಂಬದ ದುರಂತ ಸಾವಿನ ಹಿಂದೆ ಲೋನ್ ಆಪ್ ಗ್ಯಾಂಗ್ ನ ಟಾರ್ಚರ್ ಕಾರಣ ಎಂದು ಗೊತ್ತಾಗಿದೆ. ಆನ್ಲೈನ್ ಲೋನ್ ವಂಚನೆ ಜಾಲಕ್ಕೆ ಸಿಲುಕಿ ಇಡೀ ಕುಟುಂಬ ನಾಶವಾಗಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಇಡೀ ಕುಟುಂಬವೇ ನಾಶವಾಗಿ ಮೂರು ದಿನಗಳು ಕಳೆದರೂ ಲೋನ್ ಗ್ಯಾಂಗ್ ಮಾತ್ರ ಹಣದ ಮೇಲಿನ ತಮ್ಮ ದಾಹವನ್ನು ನಿಲ್ಲಿಸಿಲ್ಲ. ನಾಲ್ವರನ್ನು ಬಲಿ ಪಡೆದರೂ ಇನ್ನೂ ಕುಟುಂಬಕ್ಕೆ ನೀಡುತ್ತಿರುವ ಹಿಂಸೆ ನಿಂತಿಲ್ಲ. ಸಾವಿನ ಬಳಿಕವೂ ಮೃತ ಶಿಲ್ಪಾಳ ತಿರುಚಿದ ಅಥವಾ ಮಾರ್ಪ್ ಮಾಡಿದ ಬೆತ್ತಲೆ ಫೋಟೋವನ್ನು ಆಶಾ ಕಾರ್ಯಕರ್ತೆ ಶೀಬಾ ಜೀವನ್ ಎಂಬುವರಿಗೆ ಕಳುಹಿಸಿದ್ದಾರೆ. ಇದನ್ನು ಗಮನಿಸಿದರೆ ಲೋನ್ ಆಪ್ ಗ್ಯಾಂಗ್ ಎಷ್ಟೊಂದು ಕ್ರೂರವಾಗಿ ಕಾರ್ಯಾಚರಿಸುತ್ತಿದೆ ಅನ್ನೋದು ಗೊತ್ತಾಗುತ್ತೆ. ಇಂತಹ ಘಟನೆಗಳಿಂದಾದರೂ ಜನ ಎಚ್ಚೆತ್ತುಕೊಳ್ಳದೇ ಇದ್ದರೆ ತೊಂದರೆ ತಪ್ಪಿದ್ದಲ್ಲ.