ಉಡುಪಿ: ಬಸ್ ನಿರ್ವಾಹಕನೊಬ್ಬ ಪ್ರಯಾಣಿಕನಿಗೆ ರಾಡ್‌ನಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಘಟನೆ ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮೂಲತಃ ರಾಜಸ್ಥಾನದ ನಿವಾಸಿಯಾಗಿದ್ದು, ಉಡುಪಿ ಹಾಗೂ ಮಣಿಪಾಲದಲ್ಲಿ ನಡೆಯುವ ಜಾತ್ರೆಗಳಲ್ಲಿ ಬಲೂನ್ ಹಾಗೂ ಟ್ಯಾಟೂ ಹಾಕುವ ಕೆಲಸ ಮಾಡಿಕೊಳ್ಳುತ್ತಿರುವ ಚೀತರ್ ಹಾಗೂ ಅವರ ಸ್ನೇಹಿತರಾದ ಪ್ರಭು, ವಿನೋದಾ, ರಾಜು ಮತ್ತು ಸುರೇಶ ಅವರು ಮಾ.9ರಂದು ರಾತ್ರಿ 8 ಗಂಟೆಗೆ ಸಿಟಿ ಬಸ್ ನಿಲ್ದಾಣದಲ್ಲಿ ಮಣಿಪಾಲ ಕಡೆಗೆ ಹೋಗುವ ಖಾಸಗಿ ಬಸ್ ಹತ್ತಿದ್ದಾರೆ. ಈ ವೇಳೆ ಬಸ್‌ನ ನಿರ್ವಾಹಕ “ನೀವು ಮದ್ಯಪಾನ ಮಾಡಿದ್ದೀರಿ’ ಎಂದು ಬಸ್‌ನಿಂದ ಕೆಳಗೆ ಇಳಿಸಿದ್ದಾನೆ. ತಾವು ಮದ್ಯಪಾನ ಮಾಡಿಲ್ಲ, ಕೆಳಗೆ ಇಳಿಸಿದ್ದು ಏಕೆ ಎಂದು ಪ್ರಶ್ನಿಸಿದ್ದಕ್ಕೆ ನಿರ್ವಾಹಕನು ಪ್ರಭು ಅವರ ತಲೆ ಹಾಗೂ ಭುಜಕ್ಕೆ ಕಬ್ಬಿಣದ ರಾಡ್‌ನಿಂದ ಹೊಡೆದಿದ್ದಾನೆ. ಪರಿಣಾಮ ಅವರ ತಲೆಯಲ್ಲಿ ರಕ್ತ ಗಾಯವಾಗಿತ್ತು. ಅದೇ ಸಮಯದಲ್ಲಿ ನಿರ್ವಾಹಕ ಇತರರಿಗೂ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ವೇಳೆ ಅವರೆಲ್ಲರೂ ತಪ್ಪಿಸಿಕೊಂಡಿದ್ದಾರೆ. ಆ ಬಳಿಕ ಆತ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆ ಹಾಕಿದ್ದಾನೆ ಎಂದು ಹೇಳಿದ್ದಾರೆ.