ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಸೌತಡ್ಕ ಅಂಗನವಾಡಿ ಕೇಂದ್ರದಲ್ಲಿ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕಿಗೆ ಹಾವು ಕಚ್ಚಿದ ಆತಂಕಕಾರಿ ಘಟನೆ ಜುಲೈ 14ರಂದು ನಡೆದಿದೆ.

ಹಾವು ಕಚ್ಚಿದ ಪರಿಣಾಮ ಅಸ್ವಸ್ಥಗೊಂಡ ಬಾಲಕಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡ ಬಾಲಕಿಯನ್ನು ಮಲ್ಲಿಗೆಮಜಲು ಮಸೀದಿಯ ಅಧ್ಯಕ್ಷ ಸಿಯಾಬ್ ಅವರ ಪುತ್ರಿ ಪಾತಿಮತ್ ಸಹದಿಯಾ (4) ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಪಾತಿಮತ್ ಸಹದಿಯಾ ಎಂದಿನಂತೆ ಅಂಗನವಾಡಿಗೆ ತೆರಳಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ವೇಳೆ, ತರಗತಿ ಕೊಠಡಿಯೊಳಗೆ ಮಕ್ಕಳ ಆಟಿಕೆಗಳ ನಡುವೆ ಅಡಗಿದ್ದ ಹಾವು ಕಚ್ಚಿದೆ ಎನ್ನಲಾಗಿದೆ. ಹಾವು ಕಚ್ಚಿದ ಕೂಡಲೇ ಬಾಲಕಿ ಜೋರಾಗಿ ಅಳಲು ಆರಂಭಿಸಿದ್ದಾಳೆ. ಇದನ್ನು ಗಮನಿಸಿದ ಅಂಗನವಾಡಿ ಸಹಾಯಕಿ ತಕ್ಷಣ ಬಾಲಕಿಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ಘಟನೆ ಸಂಭವಿಸಿದ ವೇಳೆ ಅಂಗನವಾಡಿ ಶಿಕ್ಷಕಿ ಬಿ.ಎಲ್.ಒ. ಕರ್ತವ್ಯದ ನಿಮಿತ್ತ ಹೊರಗಡೆ ತೆರಳಿದ್ದರಿಂದ, ಕೇಂದ್ರದಲ್ಲಿ ಸಹಾಯಕಿ ಮಾತ್ರ ಕರ್ತವ್ಯದಲ್ಲಿದ್ದರು ಎಂದು ತಿಳಿದುಬಂದಿದೆ.
ಬಾಲಕಿಯನ್ನು ಮೊದಲು ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ವೈದ್ಯರ ಸಲಹೆಯಂತೆ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಬಾಲಕಿಗೆ ವೆನ್ಲಾಕ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.




