ಕಾಸರಗೋಡು: ಜಿಲ್ಲೆಯಲ್ಲಿ ಜಿದ್ದಾಜಿದ್ದಿನ ಸ್ಪರ್ಧೆಗೆ ಸಾಕ್ಷಿಯಾಗಿದ್ದ ಕಾಸರಗೋಡು ಮತ್ತು ತೀವ್ರ ಕುತೂಹಲ ಮೂಡಿಸಿದ್ದ ಮಂಜೇಶ್ವರದಲ್ಲಿ ಯುಡಿಎಫ್ ಮೈತ್ರಿಕೂಟದ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದಾರೆ.

ಕಾಸರಗೋಡು ಕ್ಷೇತ್ರದಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅಭ್ಯರ್ಥಿ ಕಲ್ಲತ್ರ ಮಹೀನ್ ಅವರು ಬಿಜೆಪಿ ಅಶ್ವಿನಿ ಎಂ.ಎಲ್ ಅವರ ಎದುರು 22698 ಮತಗಳ ಅಂತರದ ಜಯ ಸಾಧಿಸಿ ಮತ್ತೊಮ್ಮೆ ಕ್ಷೇತ್ರ ಮುಸ್ಲಿಂ ಲೀಗ್ ನ ಭದ್ರ ಕೋಟೆ ಅನ್ನುವುದನ್ನು ಸಾಬೀತು ಪಡಿಸಿದರು. ಮಹೀನ್ 76396 ಮತಗಳನ್ನು ಗಳಿಸಿದ್ದಾರೆ, ಅಶ್ವಿನಿ ಅವರು 53698 ಮತಗಳನ್ನು ಗಳಿಸಿದರು. ಮೂರನೇ ಸ್ಥಾನದಲ್ಲಿ ಎಲ್ ಡಿಎಫ್ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಶಾನವಾಸ್ ಪದೂರ್ 36678 ಮತಗಳನ್ನು ಗಳಿಸಿದರು.
ಈ ಬಾರಿ ಚಿತ್ರಣವೇ ಬದಲು!
ಮಂಜೇಶ್ವರದಲ್ಲಿ ಯುಡಿಎಫ್ ಮೈತ್ರಿಕೂಟದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಅಭ್ಯರ್ಥಿ ಎ ಕೆ ಎಂ ಅಶ್ರಫ್ ಅವರು ಬಿಜೆಪಿಯ ಕೆ.ಸುರೇಂದ್ರನ್ ವಿರುದ್ಧ 31,193 ಮತಗಳ ಅಂತರದಿಂದ ಜಯ ಸಾಧಿಸಿದರು. ಕಳೆದ ಎರಡು ಬಾರಿ(2016ರಲ್ಲಿ 89 ಮತಗಳು, 2021-845 ಮತಗಳು, ) ತೀವ್ರ ಸ್ಪರ್ಧೆ ನೀಡಿದ್ದ ಸುರೇಂದ್ರನ್ ಅವರು ಈ ಬಾರಿ 65174 ಮತಗಳನ್ನು ಪಡೆದು ಮತ್ತೆ ಸೋಲಿನ ಕಹಿ ಅನುಭವಿಸಬೇಕಾಯಿತು. ಎಲ್ ಡಿಎಫ್ ನ ಕೆ ಆರ್ ಜಯಾನಂದ 20365 ಮತಗಳನ್ನು ಪಡೆದರು.




