ಕುಂಬಳೆ: ಬಂದ್ಯೋಡು ಸಮೀಪದ ಅಡ್ಕದಲ್ಲಿ ರವಿವಾರ ತಡರಾತ್ರಿ ಮನೆ ನುಗ್ಗಿ ಕಳ್ಳತನ ನಡೆಸಲು ಯತ್ನಿಸಿದ ಕಳ್ಳನ ಕರಾಮತ್ತು ಮನೆಯ ಸಿಸಿಟಿವಿಯಲ್ಲಿ ದಾಖಲಾಗಿವೆ.

ಮುಂಜಾನೆ 4 ಗಂಟೆಗೆ ಸ್ಥಳೀಯ ಹನೀಫ್ ಅವರ ಮನೆಯಲ್ಲಿ ಅಡುಗೆ ಕೋಣೆ ಮೂಲಕ ಕಳ್ಳ ಒಳಗೆ ಪ್ರವೇಶಿದ್ದಾನೆ.
ಬಳಿಕ ಮನೆ ಮೊದಲ ಮಹಡಿ ಏರಿ ಬಟ್ಟೆಗಳನ್ನು ಕಳ್ಳ ಚೆಲ್ಲಾಪಿಲ್ಲಿ ಮಾಡಿದ್ದಾನೆ.
ಹನೀಫ್ ದಂಪತಿ ಮಲಗಿರುವ ಕೊಠಡಿ ಸಮೀಪ ತಲುಪುವ ಸಂದರ್ಭದಲ್ಲಿ ಹನೀಫ್ ಅವರ ಪತ್ನಿ ಎಚ್ಚರಗೊಂಡು ಬೊಬ್ಬೆ ಹೊಡೆದಿದ್ದಾರೆ. ಕಳ್ಳ ಕೈಗೆ ಸಿಕ್ಕ ಪರ್ಸ್ ನಲ್ಲಿದ್ದ 1800 ರೂ ಹಣ ಜತೆಗೆ ಪರಾರಿಯಾಗಿದ್ದಾನೆ.
ಇವರ ಮನೆ ಆಸುಪಾಸಿನ ಮಹಮದ್ ಮತ್ತು ಅಬ್ದುಲ್ಲ ಅವರ ಮನೆಯಲ್ಲಿ ಕಳ್ಳತನ ವಿಫಲ ಯತ್ನ ನಡೆದಿದೆ.
ಅಬ್ದುಲ್ಲನವರು ಬೆಳಗ್ಗೆ 3 ಗಂಟೆಗೆ ಮಸೀದಿಗೆ ಹೊರಟ ಸಂದರ್ಭದಲ್ಲಿ ಮುಸುಕುಧಾರಿ ಕಳ್ಳ ಮನೆ ಸಮೀಪ ತಲುಪಿದ್ದಾನೆ. ಈ ದೃಶ್ಯವನ್ನು ಗಲ್ಫ್ ನಲ್ಲಿರುವ ಪುತ್ರ ಗಮನಿಸಿ ಮೊಬೈಲ್ ಕರೆ ಮೂಲಕ ಮನೆಯವರನ್ನು ಎಚ್ಚರಿಸಿದ್ದರು.
ಕುಂಬಳೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ನಡೆಯುತ್ತಿದೆ.




