ಮಂಗಳೂರು: ಗುರುಪುರ-ಬಂಗ್ಲೆಗುಡ್ಡೆ ಮಾರ್ಗದ ಅಣೆಬಳಿಯ ಒಳರಸ್ತೆಯಲ್ಲಿ ಆಟೋ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವತಿಯೋರ್ವಳು ಮೃತಪಟ್ಟು, ಐವರು ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.
ಅರ್ಕುಳ ತುಪ್ಪೆಕಲ್ಲಿನ ಕುಟುಂಬವೊಂದು ಅದ್ಯಪಾಡಿ ದೇವಸ್ಥಾನಕ್ಕೆ ತೆರಳಿ ಮನೆಗೆ ಮರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಮೃತರನ್ನು ಪ್ರೀತಿ ಸಪಲಿಗ (೨೫) ಎಂದು ಗುರುತಿಸಲಾಗಿದ್ದು, ಆಕೆಯ ತಾಯಿ ಮೀನಾಕ್ಷಿ (೫೫), ಸಹೋದರಿ ಸ್ವಾತಿ (೨೩), ಅತ್ತಿಗೆ ಶೋಭಾ (೩೭), ಶೋಭಾ ಅವರ ಮಗ ಭವಿಷ್ (೯) ಮತ್ತು ಆಟೋ ರಿಕ್ಷಾ ಚಾಲಕ ಪದ್ಮನಾಭ ಗಾಯಗೊಂಡಿದ್ದಾರೆ. ಪ್ರಸ್ತುತ ಮೀನಾಕ್ಷಿ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಇತರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.