ಬೆಳ್ತಂಗಡಿ: ಸಿಡಿಲು ಸಹಿತ ಭಾರೀ ಗಾಳಿ–ಮಳೆ; ಅಪಾರ ಹಾನಿ

Share with

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಸೋಮವಾರ ಸಂಜೆ, ಗುಡುಗು, ಸಿಡಿಲು ಸಹಿತ ಭಾರೀ ಗಾಳಿ – ಮಳೆಯಾಗಿದ್ದು ಅಪಾರ ಪ್ರಮಾಣದ ಹಾನಿ ಉಂಟಾಗಿದೆ.

ಉಜಿರೆ ಸಮೀಪ ಚಲಿಸುತ್ತಿದ್ದ ಕಾರಿನ ಮೇಲೆ ಮರದ ಬೃಹತ್ ಗಾತ್ರದ ರೆಂಬೆಯೊಂದು ಮುರಿದು ಬಿದ್ದಿದೆ. ಕಾರಿಗೆ ಹಾನಿಯಾಗಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪತ್ರಕರ್ತರೊಬ್ಬರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.

ಮುಂಡಾಜೆ ಗ್ರಾ. ಪಂ. ವ್ಯಾಪ್ತಿಯ ಚಾಮುಂಡಿ ನಗರ ಪರಿಸರದಲ್ಲಿ ರಾಮಕ್ಕ ಎಂಬವರ ಮನೆಗೆ ಮರ ಬಿದ್ದು ಸಂಪೂರ್ಣ ಹಾನಿಯಾಗಿದೆ. ಈ ಪ್ರದೇಶದ ಇನ್ನೂ ನಾಲ್ಕು ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ.

ದಿಡುಪೆ – ಮುಂಡಾಜೆ ರಸ್ತೆಯ ಕುರುಡ್ಯ ಎಂಬಲ್ಲಿ ರಸ್ತೆಗೆ ಮರ ಬಿದ್ದು ಸಂಚಾರ ವ್ಯತ್ಯಯ ಉಂಟಾಯಿತು. ಮಂಜುಶ್ರೀ ನಗರದ ಶ್ರೀಪತಿ ಆಚಾರ್ಯ ಅವರ ಮನೆ ಮೇಲೆ ತೆಂಗಿನ ಮರ ಮುರಿದುಬಿದ್ದು ಹಾನಿ ಉಂಟಾಗಿದೆ. ದಿನೇಶ್ ಆಚಾರ್ಯ ಅವರ ಕಾರಿನ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ.

ಕುಳೂರು ಪ್ರದೇಶದ ರಾಧಾ ಪೂಜಾರಿ ಅವರ ಮನೆಯ ಹೆಂಚುಗಳು ಗಾಳಿಗೆ ಹಾರಿಹೋಗಿವೆ. ಮನೆ ಪರಿಸರದಲ್ಲಿ ನಾಲ್ಕು ಮರಗಳು ಉರುಳಿ ಬಿದ್ದಿವೆ. ಯಶೋದಾ ಅವರ ಮನೆಯ ಶೀಟುಗಳಿಗೆ ಹಾನಿ ಉಂಟಾಗಿದೆ. ಮುಂಡಾಜೆಯ ಜನತಾ ಕಾಲನಿಯಲ್ಲಿ ನಾಲ್ಕು ಮನೆಗಳಿಗೆ ಹಾನಿ ಸಂಭವಿಸಿದೆ.

ಅಲ್ಲಲ್ಲಿ ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ನೂರಾರು ಅಡಿಕೆ, ರಬ್ಬರ್‌ಗಿಡಗಳು ನೆಲಕಚ್ಚಿವೆ. ತಾಲೂಕಿನಾದ್ಯಂತ ವಿದ್ಯುತ್ ಪೂರೈಕೆ ಅಂತರ್ಜಾಲ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿದೆ.


Share with

Leave a Reply

Your email address will not be published. Required fields are marked *