ಬೇಸಿಗೆ ರಜೆ ಇದ್ದರೂ ಬಿಕೋ ಅನ್ನುತ್ತಿದೆ ಪಾರ್ಕ್..! ಪಾರ್ಕ್ ನತ್ತ ಸುಳಿಯುತ್ತಿಲ್ಲ ಮಕ್ಕಳು.!

Share with

ಕಾರ್ಕಳ: ಬೇಸಗೆ ರಜೆ ಆರಂಭವಾಗಿ ಕೆಲವು ದಿನಗಳು ಕಳೆದಿವೆ. ಸಾಮಾನ್ಯ ಈ ಸಮಯದಲ್ಲಿ ಸಂಜೆ ಹೊತ್ತಿಗೆ ಪಾರ್ಕ್‌ಗಳು ಮಕ್ಕಳ ಕಿರುಚಾಟ, ಆಟೋಟಗಳಿಂದ ತುಂಬಿ ತುಳುಕಬೇಕಿತ್ತು. ಆದರೆ ಈ ಬಾರಿ ಕಾರ್ಕಳದ ಪರಿಸ್ಥಿತಿಯೇ ಬೇರೆಯಾಗಿದೆ. ಅತಿಯಾದ ಬಿಸಿಲು ಮತ್ತು ಸೆಕೆಯಿಂದಾಗಿ ಪಟ್ಟಣದ ಪ್ರಮುಖ ಪಾರ್ಕ್‌ಗಳು ಸಂಜೆ ಹೊತ್ತಿನಲ್ಲೂ ಖಾಲಿ ಹೊಡೆಯುತ್ತಿವೆ.

ಕಳೆದ ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ತಾಪಮಾನದಲ್ಲಿ ಭಾರೀ ಏರಿಕೆಯಾಗಿದೆ. ಬೆಳಗ್ಗೆ ಯಿಂದಲೇ ಆರಂಭವಾಗುವ ಬಿಸಿಲಿನ ಝಳ ಸಂಜೆ 6 ಗಂಟೆಯಾದರೂ ಕಡಿಮೆಯಾಗುತ್ತಿಲ್ಲ. ಇದರಿಂದಾಗಿ ಹೆತ್ತವರು ಮಕ್ಕಳನ್ನು ಹೊರಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಕಾರ್ಕಳದ ವಿವಿಧ ಪಾರ್ಕ್ ಗಳಲ್ಲಿ ಬೆಳಗ್ಗೆ, ಸಂಜೆಯೂ ಮಕ್ಕಳು ಆಟಕ್ಕೆ ಹಿಂದೇಟು ಹಾಕುತ್ತಿದ್ದಾರೆ.

ಹಿಂದೆಲ್ಲಾ ರಜೆ ಬಂತೆಂದರೆ ಸಾಕು, ಪಾರ್ಕ್ ಗಳಲ್ಲಿ ಉಯ್ಯಾಲೆ, ಜಾರುಬಂಡಿ ಆಡಲು ಮಕ್ಕಳು ಸಾಲು ನಿಲ್ಲುತ್ತಿದ್ದರು. ಆದರೆ ಈಗ ಬಿಸಿಲಿನ ತಾಪಕ್ಕೆ ಪಾರ್ಕ್‌ಗಳಲ್ಲಿನ ಆಟಿಕೆಗಳು ಕೂಡ ಕಾದ ಕಾವಲಿಯಂತಾಗಿವೆ. “ಸೆಕೆ ಎಷ್ಟಿದೆ ಎಂದರೆ ಮನೆಯೊಳಗೂ ಇರಲಾಗುತ್ತಿಲ್ಲ, ಇನ್ನು ಹೊರಗೆ ಮಕ್ಕಳನ್ನು ಕರೆದು ಕೊಂಡು ಹೋದರೆ ಡಿಹೈಡೇಶನ್ ಆಗುವ ಭಯವಿದೆ’ ಎನ್ನುತ್ತಾರೆ ಸ್ಥಳೀಯ ಪೋಷಕರೊಬ್ಬರು.

ಒಳಾಂಗಣ ಆಟಗಳಿಗೆ ಶರಣು

ಬಿಸಿಲಿನಿಂದ ತಪ್ಪಿಸಿಕೊಳ್ಳಲು ಮಕ್ಕಳು ಈಗ ಪಾರ್ಕ್ ಬಿಟ್ಟು ಮನೆಯೊಳಗಿನ ಆಟಗಳಿಗೆ ಮೊರೆ ಹೋಗುತ್ತಿದ್ದಾರೆ. ಕೆಲವು ಮಕ್ಕಳ ಕ್ರಿಕೆಟ್ ಆಟಕ್ಕೆ ಮನೆಯ ಜಗಲಿಯೇ ವೇದಿಕೆಯಾಗಿದೆ. ಕೆಲವರು ಕೇರಂ, ಜೋಕಾಲಿ, ಹಾವು-ಏಣಿ ಆಟ, ಇನ್ನು ಕೆಲವರು ಮೊಬೈಲ್, ವಿಡಿಯೋ ಗೇಮ್ಸ್ ಅಥವಾ ಮನೆಯೊಳಗೆ ಆಡುವ ಇನ್ನಿತರ ಆಟಗಳಲ್ಲಿ ರಜೆ ಕಳೆಯುವಂತಾಗಿದೆ. ಸಂಜೆ ಸ್ವಲ್ಪ ತಂಪಾದ ಮೇಲೆ ಪಾರ್ಕ್‌ಗೆ ಬರುವ ಕೆಲವು ಕುಟುಂಬಗಳು ಕೂಡ ಅಲ್ಪ ಸಮಯದಲ್ಲೇ ಮನೆಗೆ ಮರಳುತ್ತಿವೆ.

ವೈದ್ಯರ ಸಲಹೆ ಪಾಲಿಸಿ

ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಬಿಸಿಲಿನಲ್ಲಿ ಆಟವಾಡುವುದು ತಪ್ಪಿಸಿ.

ಮನೆಯಲ್ಲೇ ತಯಾರಿಸಿದ ನಿಂಬೆ ರಸ, ಮಜ್ಜಿಗೆ, ಎಳನೀರು, ಹೆಚ್ಚಿನ ನೀರು ಸೇವಿಸಿ.

ಕಲ್ಲಂಗಡಿ, ಸೌತೆಕಾಯಿಯಂತಹ ನೀರಿನಂಶದ ಹಣ್ಣು ಬಳಸಿ.

ಕಲುಷಿತ ಆಹಾರ, ರಸ್ತೆಬದಿಯ ಕತ್ತರಿಸಿದ ಹಣ್ಣು ಬೇಡ.

-ಸಡಿಲವಾದ ಹತ್ತಿ ಬಟ್ಟೆ ಧರಿಸಿ.

ವಾಂತಿ-ಭೇದಿ ತಡೆಗಟ್ಟಲು ಆಗಾಗ ಕೈ ತೊಳೆಯುವ ಅಭ್ಯಾಸವಿರಲಿ.

ಮಧ್ಯಾಹ್ನ ಆಟ ಬೇಡ

ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಹೊರಗೆ ಆಟ ಆಡುವುದು, ತಿರುಗಾಡುವುದು ನಿಯಂತ್ರಿಸಿ. ಮನೆಯಲ್ಲೇ ತಯಾರಿಸಿದ ನಿಂಬೆ ರಸ, ಮಜ್ಜಿಗೆ, ಹಣ್ಣುಗಳ ಸೇವನೆ ಹೆಚ್ಚಿರಲಿ. ಹತ್ತಿ ಬಟ್ಟೆ ಧರಿಸಿ ಹಾಗೂ ಆಹಾರದ ಶುಚಿತ್ವದ ಬಗ್ಗೆ ಗಮನವಿರಲಿ. ನಿರ್ಜಲೀಕರಣ ಸಮಸ್ಯೆ, ಅನಾರೋಗ್ಯ ಕಂಡುಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

-ಡಾ| ಸಂದೀಪ್ ಕುಡ್ವ, ತಾಲೂಕು, ಆರೋಗ್ಯಾಧಿಕಾರಿಗಳು, ಕಾರ್ಕಳ


Share with

Leave a Reply

Your email address will not be published. Required fields are marked *