ಟೆಹ್ರಾನ್/ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿದ್ದ ಕದನ ವಿರಾಮವು ಸಂಪೂರ್ಣವಾಗಿ ಹಳಿ ತಪ್ಪಿದ್ದು, ಗಲ್ಫ್ ಪ್ರದೇಶದಲ್ಲಿ ಯುದ್ಧದ ವಾತಾವರಣ ಮತ್ತೆ ತೀವ್ರಗೊಂಡಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎಚ್ಚರಿಕೆಯ ಬೆನ್ನಲ್ಲೇ, ಯುಎಸ್ ಮಿಲಿಟರಿಯ ಸೆಂಟ್ರಲ್ ಕಮಾಂಡ್ ಇರಾನ್‌ನ ಹಲವು ಪ್ರಮುಖ ನೆಲೆಗಳ ಮೇಲೆ ಸರಣಿ ವೈಮಾನಿಕ ದಾಳಿಗಳನ್ನು ನಡೆಸಿದೆ.
ಇರಾನ್ ಮೇಲೆ ಅಮೆರಿಕ ದಾಳಿ: ಇರಾನ್ ರಾಜಧಾನಿ ಟೆಹ್ರಾನ್‌ನ ಪಶ್ಚಿಮ ಭಾಗ, ಫಾರ್ಸ್ ಪ್ರಾಂತ್ಯ, ಬಂದರ್ ಅಬ್ಬಾಸ್, ಕೇಶ್ ದ್ವೀಪ ಮತ್ತು ಇಸಹಾನ್ ಸೇರಿದಂತೆ ಇರಾನ್‌ನ ದಕ್ಷಿಣ ಮತ್ತು ಕೇಂದ್ರ ಭಾಗಗಳಲ್ಲಿ ಪ್ರಬಲ ಸ್ಫೋಟಗಳು ಸಂಭವಿಸಿವೆ. ಅಮೆರಿಕ ಪಡೆಗಳು ಒಟ್ಟು 49 ಟೊಮಾಹಾಕ್ (Tomahawk) ಕ್ಷಿಪಣಿಗಳನ್ನು ಬಳಸಿ ಇರಾನ್‌ನ ರಾಡಾರ್ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿವೆ.
ಇರಾನ್‌ನ ಪ್ರತಿದಾಳಿ: ಅಮೆರಿಕದ ದಾಳಿಗೆ ತೀಕ್ಷ್ಯ ಪ್ರತಿಕ್ರಿಯೆ ನೀಡಿರುವ ಇರಾನ್‌ನ
ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಕುವೈತ್ ಮತ್ತು ಬಹೇನ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ 18 ಕ್ಷಿಪಣಿಗಳನ್ನು ಉಡಾಯಿಸಿದೆ. ಬಹೇನ್‌ನಲ್ಲಿರುವ ಯುಎಸ್‌ನ 5ನೇ ನೌಕಾಪಡೆ ಹಾಗೂ ಶೇಖ್ ಇಸಾ ವಾಯುನೆಲೆ ಮತ್ತು ಕುವೈತ್‌ನ ಅಲಿ ಅಲ್ ಸಲೇಮ್ ನೆಲೆಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ.
ಹೊರ್ಮುಜ್ ಜಲಸಂಧಿ ಬಂದ್: ಜಾಗತಿಕ ತೈಲ ಸಾಗಣೆಯ ಅತ್ಯಂತ ಪ್ರಮುಖ ಮಾರ್ಗವಾಗಿರುವ ‘ಹೊರ್ಮುಜ್ ಜಲಸಂಧಿ’ಯನ್ನು ತೈಲ ಟ್ಯಾಂಕರ್ ಸೇರಿದಂತೆ ಎಲ್ಲಾ ರೀತಿಯ ವಾಣಿಜ್ಯ ಹಡಗುಗಳ ಸಂಚಾರಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ಸಂಪೂರ್ಣವಾಗಿ ಮುಚ್ಚಿರುವುದಾಗಿ ಇರಾನ್ ಘೋಷಿಸಿದೆ.
ಇರಾನ್‌ನ ಕ್ಷಿಪಣಿ ದಾಳಿಯ ಬೆನ್ನಲ್ಲೇ ಬಹರೈನ್ ಮತ್ತು ಕುವೈತ್ ದೇಶಗಳಲ್ಲಿ ಸೈರನ್ ಸೌಂಡ್ ಮೊಳಗಿದ್ದು, ಅಲ್ಲಿನ ವಾಯು ರಕ್ಷಣಾ ವ್ಯವಸ್ಥೆಗಳು ಶತ್ರು ಕ್ಷಿಪಣಿಗಳನ್ನು ಹೊಡೆದುರುಳಿಸಲು ಸನ್ನದ್ದವಾಗಿವೆ. ನಾಗರಿಕರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಬಹರೈನ್ ಆಂತರಿಕ ಸಚಿವಾಲಯ ಸೂಚನೆ ನೀಡಿದೆ.
ಇತ್ತ ಅಮೆರಿಕ ಅಧ್ಯಕ್ಷ ಟ್ರಂಪ್, ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ದಾಳಿ ಮುಂದುವರಿಯಲಿದೆ ಎಂದು ಎಚ್ಚರಿಸಿದ್ದಾರೆ.




