ದೇವನಹಳ್ಳಿ, ಮೇ 21: ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಏರ್ ಇಂಡಿಯಾ (Air India) ಸಂಸ್ಥೆಯ ವಿಮಾನವೊಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ರನ್ವೇಗೆ ಅದರ ಹಿಂಭಾಗ ನೆಲಕ್ಕಪ್ಪಳಿಸಿದ (Tail Strike) ಘಟನೆ ನಡೆದಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಪ್ರಯಾಣಿಕರು ಸೇರಿದಂತೆ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿ ಆಗಿದೆ.
ಮುಖ್ಯಾಂಶಗಳು
ಕೆಂಪೇಗೌಡ ಏರ್ಪೋರ್ಟ್ನಲ್ಲಿ ಲ್ಯಾಂಡಿಂಗ್ ವೇಳೆ ನೆಲಕ್ಕಪ್ಪಳಿಸಿದ ವಿಮಾನದ ಹಿಂಭಾಗ
ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ
ತಪ್ಪಿದ ದುರಂತ, ಪ್ರಯಾಣಿಕರು ಜಸ್ಟ್ ಮಿಸ್
ಆಗಿದ್ದೇನು?
ಏರ್ ಇಂಡಿಯಾ ಸಂಸ್ಥೆಯ AI2651 ಸಂಖ್ಯೆಯ ವಿಮಾನ ಇಂದು ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿತ್ತು. ಆದರೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಉಂಟಾದ ತಾಂತ್ರಿಕ ಅಡಚಣೆಯಿಂದ ಅವಘಡ ಸಂಭವಿಸಿದೆ. ಎನ್ಡಿ ಟಿವಿ ವರದಿ ಪ್ರಕಾರ, ಈ ವಿಮಾನಕ್ಕೂ ಮುನ್ನ ಸರಕು ಸಾಗಣೆ ವಿಮಾನವೊಂದು ಅದೇ ರನ್ವೇಯಿಂದ ಟೇಕ್ ಆಫ್ ಆಗಿತ್ತು. ಇದರಿಂದಾಗಿ ವಾತಾವರಣದಲ್ಲಿ ಉಂಟಾದ ಗಾಳಿಯ ತೀವ್ರ ವೇಗದಿಂದ ಏರ್ ಇಂಡಿಯಾ ವಿಮಾನದ ಸಮತೋಲನ ತಪ್ಪಿದೆ. ಹೀಗಿರುವಾಗ ಪೈಲಟ್ ವಿಮಾನವನ್ನು ಪುನಃ ಹಾರಾಟಕ್ಕೆ ಪ್ರಯತ್ನಿಸಿದ್ದಾರೆ. ಈ ವೇಳೆ ವಿಮಾನದ ಹಿಂಭಾಗ ರನ್ವೇಗೆ ಅಪ್ಪಳಿಸಿದೆ.
ಏರ್ ಇಂಡಿಯಾ ಸಂಸ್ಥೆಯ ಅಧಿಕಾರಿ ಹೇಳಿದ್ದಿಷ್ಟು
ಇನ್ನು ಅವಘಡದ ಮಧ್ಯೆ ತಕ್ಷಣ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ. ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನ ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ಈ ಬಗ್ಗೆ ಏರ್ ಇಂಡಿಯಾ ಸಂಸ್ಥೆಯ ಅಧಿಕಾರಿಯೊಬ್ಬರು ಮಾತನಾಡಿದ್ದು, ‘ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದು, ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ತಾಂತ್ರಿಕ ಸಮಸ್ಯೆನಾ ಅಥವಾ ಪೈಲಟ್ಗಳ ಎಡವಟ್ಟ ಎನ್ನುವ ಬಗ್ಗೆ ತನಿಖೆ ನಡೆಯಲಿದೆ. ತನಿಖೆ ಮುಗಿಯುವವರೆಗೆ ವಿಮಾನ ಚಲಾಯಿಸುತ್ತಿದ್ದ ಪೈಲಟ್ಗಳನ್ನು ಕರ್ತವ್ಯದಿಂದ ವಜಾಗೊಳಿಸಲಾಗಿದೆ.
ಪ್ರಯಾಣಿಕರಿಗೆ ಪರ್ಯಾಯ ವಿಮಾನದ ವ್ಯವಸ್ಥೆ
ಅಪಘಾತಕ್ಕೀಡಾದ ವಿಮಾನವನ್ನು ತಪಾಸಣೆಗೆ ಒಳಪಡಿಸಿರುವುದರಿಂದ, ಬೆಂಗಳೂರಿನಿಂದ ದೆಹಲಿಗೆ ಮರಳಬೇಕಾಗಿದ್ದ ವಿಮಾನದ ಸೇವೆಯನ್ನು ರದ್ದುಗೊಳಿಸಲಾಗಿದೆ. ಇದರಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಪ್ರಯಾಣಿಕರಿಗೆ ಏರ್ ಇಂಡಿಯಾ ಸಂಸ್ಥೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಿದೆ ಹಾಗೂ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದೆ.





