ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಲಷ್ಕರ್ ಇ ತೊಯ್ಬಾ ಸಂಘಟನೆಗೆ ಸೇರಿದ ಇಬ್ಬರು ಭಯೋತ್ಪಾದಕರು ಹತಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳವಾರ ಮುಂಜಾನೆ ಶೋಪಿಯಾನ್‌ನ ಅಲ್ಶಿಪೋರಾ ಪ್ರದೇಶದಲ್ಲಿ ಎನ್‌ಕೌಂಟರ್ ಆರಂಭವಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ. ಮೃತ ಉಗ್ರರನ್ನು ಮೊರಿಫತ್ ಮಕ್ಬೂಲ್ ಮತ್ತು ಜಾಸಿಮ್ ಫಾರೂಕ್ ಅಲಿಯಾಸ್ ಅಬ್ರರ್ ಎಂದು ಗುರುತಿಸಲಾಗಿದೆ.
ಶೋಪಿಯಾನ್ ನ ಅಲ್ಶಿಪೊರಾ ಪ್ರದೇಶದಲ್ಲಿ ಉಗ್ರಗಾಮಿಗಳು ಇರುವ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಗುಂಡಿನ ಚಕಮಕಿ ನಡೆದಿದ್ದು ಭದ್ರತಾ ಪಡೆಗಳ ಗುಂಡಿನ ದಾಳಿಗೆ ಇಬ್ಬರು ಉಗ್ರರು ಬಲಿಯಾಗಿದ್ದಾರೆ.