ಬಂಟ್ವಾಳ: ಶಾಲಾ ಮಕ್ಕಳು ಬಸ್ ನ ಫುಟ್ ಬೋರ್ಡ್ ನಲ್ಲಿ ನೇತಾಡಿಕೊಂಡು ಹೋಗುವ ಭಯಾನಕ ವಿಡಿಯೋ ಇದೀಗ ವೈರಲ್ ಆಗಿದೆ.
“ಶಾಲಾಮಕ್ಕಳ ಭವಿಷ್ಯ ಯಾರ ಕೈಯಲ್ಲಿ” ಎಂಬ ಬರಹದ ಜೊತೆ ವಿಡಿಯೋ ವೈರಲ್ ಆಗಿದೆ.
ಬಂಟ್ವಾಳದಲ್ಲಿ ಬಿಸಿರೋಡು ವಿಟ್ಲ ನಾಮ ಫಲಕವಿರುವ ಬಸ್ ನಲ್ಲಿ ಈ ದೃಶ್ಯ ಕಂಡು ಬಂದಿದೆ. ಮುಂಭಾಗದಲ್ಲಿ ಮತ್ತು ಹಿಂಭಾಗದ ಎರಡು ಪುಟ್ ಬೋರ್ಡಿನಲ್ಲಿ ಬ್ಯಾಗ್ ಹಾಕಿಕೊಂಡು ವಿದ್ಯಾರ್ಥಿಗಳು ನೇತಾಡುತ್ತಿರುವುದು ಕಂಡು ಬಂದಿದೆ.
ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಘಟನೆ ಮಾಸುವ ಮುನ್ನವೇ ಇಂತಹ ವಿಡಿಯೋಗಳು ವೈರಲ್ ಆಗಿರುವುದು ಮಕ್ಕಳ ಪೋಷಕರಲ್ಲಿ ಆತಂಕ ಉಂಟಾಗಿದೆ.
ಕೆಲ ದಿನಗಳ ಹಿಂದೆ ಪುಟ್ ಬೋರ್ಡಿನಿಂದ ಬಸ್ ಕಂಡಕ್ಟರ್ ಓರ್ವ ಕೈ ತಪ್ಪಿ ನೆಲಕ್ಕುರುಳಿ ಮೃತಪಟ್ಟ ವಿಡಿಯೋ ಸಿ.ಸಿ.ಕ್ಯಾಮರಾ ದಲ್ಲಿ ಸೆರೆಯಾಗಿತ್ತು.
ಘಟನೆಯಿಂದಾಗಿ ಅಧಿಕಾರಿಗಳು ಎಚ್ಚರಿಕೆ ನೀಡುವ ಕೆಲಸ ಮಾಡದರೂ ಗ್ರಾಮೀಣ ಭಾಗದ ಕೆಲವು ಕಡೆಗಳಲ್ಲಿ ಇಂತಹ ಪ್ರಕರಣಗಳು ಕಂಡು ಬರುತ್ತಿರುವುದು ವಿಪರ್ಯಾಸವೇ ಸರಿ. ಶಾಲಾ ಮಕ್ಕಳಿಗೆ ಬೆಳಿಗ್ಗೆ ಮತ್ತು ಸಂಜೆ ಅವಧಿಯಲ್ಲಿ ಪ್ರಯಾಣಿಸಲು ಸಾಕಷ್ಟು ಬಸ್ ಗಳಿಲ್ಲದೆ ತೊಂದರೆಯಾಗುತ್ತಿದೆ. ಹಾಗಾಗಿ ಅನಿವಾರ್ಯವಾಗಿ ಮಕ್ಕಳು ನೇತಾಡಿಕೊಂಡು ಹೋಗುತ್ತಿದ್ದಾರೆ. ಈ ಸಮಸ್ಯೆ ಪರಿಹಾರಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ.